ಬಾಲಿವುಡ್ ನಲ್ಲಿ ಕೆಲಸ ಬೇಕಿದ್ದರೆ ‘ಘರ್ ವಾಪ್ಸಿ’ ಮಾಡಿ: ಎ.ಆರ್. ರೆಹಮಾನ್ ಗೆ ವಿಶ್ವ ಹಿಂದೂ ಪರಿಷತ್ ಸಲಹೆ
ಎ. ಆರ್. ರೆಹಮಾನ್ (File Photo: PTI)
ಹೊಸದಿಲ್ಲಿ: ಬಾಲಿವುಡ್ ನಲ್ಲಿ ಕೆಲಸಕಳೆದುಕೊಂಡಿರುವ ಬಗ್ಗೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರ ಇತ್ತೀಚಿನ ಹೇಳಿಕೆಗೆ ವಿಶ್ವ ಹಿಂದೂ ಪರಿಷತ್ ಶನಿವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಮತ್ತೆ ಕೆಲಸ ಬೇಕಿದ್ದರೆ ರೆಹಮಾನ್ ಅವರು ‘ಘರ್ ವಾಪ್ಸಿ’ ಮಾಡಬೇಕು ಎಂದು ವಿಹಿಂಪ ರಾಷ್ಟ್ರೀಯ ವಕ್ತಾರ ವಿನೋದ ಬನ್ಸಾಲ್ ಹೇಳಿದ್ದಾರೆ.
ಬಹುಶಃ ಕೋಮುವಾದದ ಕಾರಣದಿಂದಾಗಿ ತಾನು ಕಳೆದ ಎಂಟು ವರ್ಷಗಳಲ್ಲಿ ಹಿಂದಿ ಚಿತ್ರೋದ್ಯಮದಲ್ಲಿ ಕೆಲಸ ಕಳೆದುಕೊಂಡಿರಬಹುದು ಎಂಬ ರೆಹಮಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬನ್ಸಾಲ್, ರೆಹಮಾನ್ ಒಂದು ನಿರ್ದಿಷ್ಟ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ರೆಹಮಾನ್ ಕೂಡ ಒಮ್ಮೆ ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿಯವರು ನಾಯಕರಾಗಿದ್ದ ಗುಂಪಿನ ನಾಯಕರಾಗಿರುವಂತೆ ಕಾಣುತ್ತಿದೆ ಎಂದರು.
ಅನ್ಸಾರಿಯವರು ಹತ್ತು ವರ್ಷಗಳ ಕಾಲ ಲಾಭಗಳನ್ನು ಪಡೆದಿದ್ದರು ಮತ್ತು ಸಾಂವಿಧಾನಿಕ ಹುದ್ದೆಗಳನ್ನು ಹೊಂದಿದ್ದರು, ಆದರೆ ನಿವೃತ್ತಿಯ ಬಳಿಕ ಭಾರತವನ್ನು ಅವಮಾನಿಸಿದ್ದರು ಎಂದು ಆರೋಪಿಸಿದರು.
ರೆಹಮಾನ್ ವಿರುದ್ಧ ವಾಗ್ದಾಳಿ ನಡೆಸಿದ ಬನ್ಸಾಲ್, ಒಮ್ಮೆ ರೆಹಮಾನ್ ಎಲ್ಲ ಭಾರತೀಯರು ಮತ್ತು ಹಿಂದುಗಳ ಮೆಚ್ಚುಗೆಗೆ ಪಾತ್ರರಾಗಿದ್ದರು, ಆದರೆ ಈಗ ತನಗೇಕೆ ಕೆಲಸ ಸಿಗುತ್ತಿಲ್ಲ ಎನ್ನುವದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಬದಲು ವ್ಯವಸ್ಥೆಯ ವಿರುದ್ಧ ಕೆಟ್ಟ ಮಾತುಗಳನ್ನಾಡುವ ಮೂಲಕ ಇಡೀ ಉದ್ಯಮಕ್ಕೆ ಅಪಖ್ಯಾತಿ ತರುತ್ತಿದ್ದಾರೆ ಎಂದರು.
ರೆಹಮಾನ್ ಒಮ್ಮೆ ಹಿಂದೂ ಆಗಿದ್ದರು. ಅವರೇಕೆ ಇಸ್ಲಾಮ್ ಧರ್ಮಕ್ಕೆಮತಾಂತರಗೊಂಡಿದ್ದರು? ಈಗ ‘ಘರ್ ವಾಪ್ಸಿ’ ಮಾಡಿ. ನಿಮಗೆ ಮತ್ತೆ ಕೆಲಸ ಸಿಗಲು ಆರಂಭವಾಗಬಹುದು ಎಂದು ಹೇಳಿದ ಬನ್ಸಾಲ್, ಇಂತಹ ಹೇಳಿಕೆಗಳು ರಾಜಕಾರಣಿಗಳಿಗೆ ಸೂಕ್ತವಾಗಿರಬಹುದು, ಆದರೆ ಕಲಾವಿದನಿಗೆ ಅಲ್ಲ ಎಂದರು.
ಬಿಬಿಸಿ ಏಶ್ಯನ್ ನೆಟ್ವರ್ಕ್ ಗೆ ನೀಡಿದ್ದ ಸಂದರ್ಶನದಲ್ಲಿ ರೆಹಮಾನ್, ಹಲವು ವರ್ಷಗಳಿಂದಲೂ ತಾನು ಬಾಲಿವುಡ್ ನಲ್ಲಿ ಹೊರಗಿನವನು ಎಂಬಂತೆ ಭಾಸವಾಗುತ್ತಿದ್ದು, ಕಳೆದ ಎಂಟು ವರ್ಷಗಳಿಂದಲೂ ಯಾವುದೇ ಕೆಲಸ ಸಿಗುತ್ತಿಲ್ಲ ಎಂದು ಹೇಳಿದ್ದರು. ಸಂಭಾವ್ಯ ಕಾರಣಗಳ ಕುರಿತು ಮಾತನಾಡಿದ ಅವರು, ‘ಅದು ಕೋಮುವಾದ ಆಗಿರಬಹುದು, ಆದರೆ ಅದು ನನ್ನ ಮುಂದಿಲ್ಲ’ ಎಂದೂ ಹೇಳಿದ್ದರು.
ತಾನು ಕೆಲಸದ ಅರಸಾಟದ ಹಿಂದೆ ಬಿದ್ದಿಲ್ಲ ಎಂದು ಹೇಳಿದ್ದ ರೆಹಮಾನ್, ‘ಎಲ್ಲವೂ ಒಳ್ಳೆಯದೇ. ಕುಟುಂಬದೊಂದಿಗೆ ಕಳೆಯಲು ಈಗ ನನ್ನ ಬಳಿ ಹೆಚ್ಚು ಸಮಯವಿದೆ. ನಾನು ಕೆಲಸದಹುಡುಕಾಟದಲ್ಲಿಲ್ಲ. ಕೆಲಸ ನನ್ನ ಬಳಿ ಬರಬೇಕು ಎಂದು ನಾನು ಬಯಸುತ್ತೇನೆ. ನನ್ನ ಪ್ರಾಮಾಣಿಕತೆಯು ಕೆಲಸವನ್ನು ಗಳಿಸಬೇಕು. ನನಗೆ ಏನು ಸಿಗಬೇಕೋ ಅದನ್ನು ನಾನು ಪಡೆಯುತ್ತೇನೆ’ಎಂದಿದ್ದರು.