ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಸೋಲು: ಹೋರಾಟ ಮುಗಿದಿಲ್ಲ ಎಂದ ಠಾಕ್ರೆ ಸೋದರರು
Photo Credit : PTI
ಮುಂಬೈ: 25 ವರ್ಷಗಳ ನಂತರ ದೇಶದ ಅತ್ಯಂತ ಶ್ರೀಮಂತ ನಗರ ಪಾಲಿಕೆಯ ಮೇಲಿನ ನಿಯಂತ್ರಣ ಕಳೆದುಕೊಂಡಿರುವ ಠಾಕ್ರೆ ಸೋದರ ಸಂಬಂಧಿಗಳು, “ಈ ಹೋರಾಟವಿನ್ನೂ ಮುಗಿದಿಲ್ಲ” ಎಂದು ಘೋಷಿಸಿದ್ದಾರೆ. ಇದರೊಂದಿಗೆ ಮರಾಠಿ ಅಸ್ಮಿತೆಯ ರಾಜಕೀಯವನ್ನು ಮುಂದುವರಿಸಿರುವ ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ ಅವಿಭಜಿತ ಶಿವಸೇನೆಯ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಫೋಟೊವನ್ನು ಶಿವಸೇನೆ (ಉದ್ಧವ್ ಬಣ) ಹಂಚಿಕೊಂಡಿದೆ.
ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಜಯ ಗಳಿಸಿದ್ದು, ಆಡಳಿತಾರೂಢ ಮಹಾಯುತಿ ಮೈತ್ರಿಕೂಟವನ್ನು ಸೋಲಿಸಲು ಒಂದಾಗಿದ್ದ ಠಾಕ್ರೆಗಳಿಂದ ಅಧಿಕಾರ ಕಸಿದುಕೊಂಡಿವೆ. ಹೀಗಾಗಿ ಎರಡೂವರೆ ದಶಕದ ಬಳಿಕ ಬಿಎಂಸಿ ಆಡಳಿತದಿಂದ ಠಾಕ್ರೆ ಕುಟುಂಬ ಕೆಳಕ್ಕಿಳಿದಿದೆ.
ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಈ ಸೋದರ ಸಂಬಂಧಿಗಳು ಮರಾಠಿ ಅಸ್ಮಿತೆಯನ್ನು ಮತದಾರರ ಮುಂದೆ ಪ್ರದರ್ಶಿಸಿದ್ದರು. ಹಲವು ವರ್ಷಗಳ ಬಳಿಕ ಒಂದಾಗಿದ್ದ ಠಾಕ್ರೆ ಸೋದರರಿಗೆ ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆ ರಾಜಕೀಯದಲ್ಲಿ ಹೊಸ ಅಧ್ಯಾಯ ತೆರೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚುನಾವಣಾ ಫಲಿತಾಂಶದಲ್ಲಿ ಅವರಿಗೆ ಭಾರಿ ಹಿನ್ನಡೆಯುಂಟಾಗಿದೆ.
227 ವಾರ್ಡ್ ಗಳ ಪೈಕಿ 65 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷವು, “ಮರಾಠಿಗಳಿಗೆ ಅರ್ಹವಾದ ಗೌರವ ಸಿಗುವವರೆಗೆ ನಮ್ಮ ಹೋರಾಟ ಹೀಗೆಯೇ ಮುಂದುವರಿಯಲಿದೆ” ಎಂದು ಭರವಸೆ ನೀಡಿದ್ದಾರೆ.
ಮತ್ತೊಂದೆಡೆ “ಸೋಲು ಎಂದರೆ ಎದೆಗುಂದಿ ಬಿಟ್ಟುಕೊಡುವುದಲ್ಲ. ಮರಾಠಿಗರ ವಿರುದ್ಧವಾಗಿ ಏನಾದರೂ ನಡೆಯುತ್ತಿರುವುದನ್ನು ಕಂಡರೆ, ನಮ್ಮ ಕಾರ್ಪೊರೇಟರ್ ಗಳು ಖಂಡಿತವಾಗಿಯೂ ಮೊಣಕಾಲೂರಿಸಿ ಕುಳ್ಳರಿಸಲಿದ್ದಾರೆ” ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಎಚ್ಚರಿಸಿದ್ದಾರೆ.
“ನಮ್ಮ ಹೋರಾಟ ಮರಾಠಿ ಜನರಿಗಾಗಿ, ಮರಾಠಿ ಭಾಷೆಗಾಗಿ, ಮರಾಠಿ ಅಸ್ಮಿತೆಗಾಗಿ ಮತ್ತು ಸಮೃದ್ಧ ಮಹಾರಾಷ್ಟ್ರಕ್ಕಾಗಿ. ಈ ಹೋರಾಟವೇ ನಮ್ಮ ಅಸ್ತಿತ್ವ. ಅಂತಹ ಹೋರಾಟಗಳು ದೀರ್ಘಕಾಲೀನ ಸ್ವರೂಪದ್ದಾಗಿವೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ” ಎಂದು ಅವರು ಹೇಳಿದ್ದಾರೆ.
ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕೇವಲ ಆರು ವಾರ್ಡ್ ಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.