Arunachal Pradesh | ಹೆಪ್ಪುಗಟ್ಟಿದ ಸರೋವರಕ್ಕೆ ಜಾರಿ ಬಿದ್ದು ಕೇರಳದ ಇಬ್ಬರು ಪ್ರವಾಸಿಗರು ಮೃತ್ಯು; ಓರ್ವನ ಮೃತದೇಹ ಪತ್ತೆ
Screengrab:X/@PTI_News
ತವಾಂಗ್ (ಅರುಣಾಚಲ ಪ್ರದೇಶ): ಇಬ್ಬರು ಕೇರಳ ಪ್ರವಾಸಿಗರು ಸೇಲಾ ಸರೋವರಕ್ಕೆ ಜಾರಿ ಬಿದ್ದು, ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓರ್ವನ ಮೃತದೇಹವನ್ನು ಪತ್ತೆಯಾಗಿದ್ದು, ಮತ್ತೊಬ್ಬ ಪ್ರವಾಸಿಯ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ದಿನು (26) ಹಾಗೂ ಮಹಾದೇವ್ (24) ಎಂದು ಗುರುತಿಸಲಾಗಿದ್ದು, ಈ ಪೈಕಿ ಮಹಾದೇವ್ ಈವರೆಗೆ ಪತ್ತೆಯಾಗಿಲ್ಲ. ಗುವಾಹಟಿಯ ಮೂಲಕ ತವಾಂಗ್ ಗೆ ಆಗಮಿಸಿದ್ದ ಏಳು ಸದಸ್ಯರ ಪ್ರವಾಸಿ ಗುಂಪಿನಲ್ಲಿ ಈ ಇಬ್ಬರೂ ಇದ್ದರು.
ಪೊಲೀಸರ ಪ್ರಕಾರ, ಗುರುವಾರ ಮಧ್ಯಾಹ್ನ ಪ್ರವಾಸಿ ಗುಂಪಿನ ಓರ್ವ ಸದಸ್ಯ ಹೆಪ್ಪುಗಟ್ಟಿದ್ದ ಸರೋವರಕ್ಕೆ ಜಾರಿ ಬಿದ್ದಾಗ ನಡೆದಿದೆ ಎನ್ನಲಾಗಿದೆ. ಆತನನ್ನು ರಕ್ಷಿಸುವ ಸಲುವಾಗಿ ದಿನು ಹಾಗೂ ಮಹಾದೇವ್ ಸರೋವರಕ್ಕೆ ಇಳಿದಿದ್ದಾರೆ. ಮೊದಲಿಗೆ ಜಾರಿ ಬಿದ್ದಿದ್ದ ಪ್ರವಾಸಿ ಸರೋವರದಿಂದ ಸುರಕ್ಷಿತವಾಗಿ ಹೊರ ಬರುವಲ್ಲಿ ಯಶಸ್ವಿಯಾಗಿದ್ದರೆ, ಆತನನ್ನು ರಕ್ಷಿಸಲು ಸರೋವರಕ್ಕೆ ಇಳಿದಿದ್ದ ದಿನು ಹಾಗೂ ಮಹಾದೇವ್ ಹೆಪ್ಪುಗಟ್ಟಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಮಾಹಿತಿ ದೊರೆಯುತ್ತಿದ್ದಂತೆಯೇ ಜಿಲ್ಲಾ ಪೊಲೀಸರು, ಕೇಂದ್ರೀಯ ಪಡೆಗಳು ಹಾಗೂ ರಾಜ್ಯ ವಿಪತ್ತು ಸ್ಪಂದನ ಪಡೆಗಳೊಂದಿಗೆ ತವಾಂಗ್ ಜಿಲ್ಲಾಡಳಿತ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಪ್ರತಿಕೂಲ ಹವಾಮಾನ ಹಾಗೂ ಕಡಿಮೆ ಗೋಚರತೆ ಪ್ರಮಾಣದ ಹೊರತಾಗಿಯೂ ರಕ್ಷಣಾ ತಂಡಗಳು ಓರ್ವ ಪ್ರವಾಸಿಯ ಮೃತದೇಹವನ್ನು ಪತ್ತೆ ಹಚ್ಚಿದೆ. ಕತ್ತಲು ಹಾಗೂ ವಿಷಮ ಪರಿಸ್ಥಿತಿಯ ಕಾರಣಕ್ಕೆ ಮತ್ತೊಬ್ಬ ಪ್ರವಾಸಿಯ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಶನಿವಾರ ಬೆಳಗ್ಗೆಯಿಂದ ಕಾರ್ಯಾಚರಣೆ ಮತ್ತೆ ಪ್ರಾರಂಭಗೊಂಡಿದೆ.
13,000 ಅಡಿ ಎತ್ತರದಲ್ಲಿರುವ ಸೆಲಾ ಸರೋವರ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ತೀವ್ರ ಚಳಿ ಹಾಗೂ ದುರ್ಬಲ ಮಂಜುಗಡ್ಡೆಯ ಹೊದಿಕೆಯಿಂದಾಗಿ ಈ ಸರೋವರವು ಚಳಿಗಾಲದಲ್ಲಿ ಗಂಭೀರ ಅಪಾಯವನ್ನೂ ಒಡ್ಡುತ್ತದೆ.
STORY | Two Kerala tourists drown after slipping into frozen Sela Lake in Arunachal Pradesh
— Press Trust of India (@PTI_News) January 16, 2026
Two tourists from Kerala drowned in the Sela Lake in Arunachal Pradesh's Tawang district on Friday, police said. The body of one of them was recovered, while a search was underway to… pic.twitter.com/8jBhxu8NRH