10 ಕೋಟಿ ರೂ. ನೀಡುವಂತೆ ಪಂಜಾಬಿ ಗಾಯಕನಿಗೆ ಬಿಷ್ಣೋಯ್ ಗ್ಯಾಂಗ್ ನಿಂದ ಬೆದರಿಕೆ
ಬಿ ಪ್ರಾಕ್ (Photo credit: X/@garrywalia_)
ಮೊಹಾಲಿ (ಪಂಜಾಬ್): ಸ್ನೇಹಿತ ಮತ್ತು ಸಹ ಗಾಯಕ ಬಿ ಪ್ರಾಕ್ ಅವರಿಗೆ 10 ಕೋಟಿ ರೂ. ನೀಡುವಂತೆ ಹೇಳಬೇಕು, ಇಲ್ಲದಿದ್ದರೆ ಒಂದು ವಾರದೊಳಗೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನನಗೆ ಬೆದರಿಕೆ ಕರೆ ಬಂದಿದೆ ಎಂದು ಪಂಜಾಬಿ ಗಾಯಕ ದಿಲ್ನೂರ್ ಮೊಹಾಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮೊಹಾಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿರುವ ದಿಲ್ನೂರ್, ನನಗೆ ಕರೆ ಮಾಡಿದ್ದ ವ್ಯಕ್ತಿ ತನ್ನನ್ನು ಅರ್ಜು ಬಿಷ್ಣೋಯಿ ಎಂದು ಹೇಳಿಕೊಂಡಿದ್ದು, ನಾನು ಲಾರೆನ್ಸ್ ಬಿಷ್ಣೋಯಿ ಗುಂಪಿಗೆ ಸೇರಿದವನು ಎಂದು ಹೇಳಿದ್ದಾನೆ ಎಂದು ತಿಳಿಸಿದ್ದಾರೆ.
ಬಿ ಪ್ರಾಕ್ ಬಾಲಿವುಡ್ ಮತ್ತು ಪಂಜಾಬಿ ಸಂಗೀತ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದಾರೆ. ಕೇಸರಿ ಚಿತ್ರದ ತೇರಿ ಮಿಟ್ಟಿ, ಫಿಲ್ಹಾಲ್, ಪಚ್ತಾವೋಗೆ, ಶೇರ್ಷಾ ಸಿನಿಮಾದ ರಾಂಜಾ, ಮಾನ ದಿಲ್ ಮತ್ತು ಕೇಸರಿಯಾ ರಂಗ್ ಸೇರಿದಂತೆ ಹಲವು ಹಿಟ್ ಸಾಂಗ್ನಲ್ಲಿ ಕೆಲಸ ಮಾಡಿದ್ದಾರೆ.
ಜನವರಿ 5ರಂದು ವಿದೇಶದಿಂದ ಎರಡು ಮಿಸ್ಡ್ ಕಾಲ್ ಸ್ವೀಕರಿಸಿದ್ದೇನೆ. ಆದರೆ ಅದಕ್ಕೆ ನಾನು ಉತ್ತರಿಸಿರಲಿಲ್ಲ. ಮರುದಿನ ಮತ್ತೊಂದು ಕರೆ ಸ್ವೀಕರಿಸಿದ್ದು, ಅದು ಮತ್ತೊಂದು ವಿದೇಶಿ ಸಂಖ್ಯೆಯಿಂದ ಬಂದಿತ್ತು. ನಾನು ಕರೆಗೆ ಉತ್ತರಿಸಿದೆನಾದರೂ, ಸಂಶಯಾಸ್ಪದವಾಗಿ ಕಂಡು ಬಂದಿದ್ದರಿಂದ ಸಂಪರ್ಕ ಕಡಿತಗೊಳಿಸಿದೆ. ಬಳಿಕ ನಾನು ವಾಯ್ಸ್ ಮೆಸೇಜ್ ವೊಂದನ್ನು ಸ್ವೀಕರಿಸಿದ್ದು, ಆ ಸಂದೇಶದಲ್ಲಿ 10 ಕೋಟಿ ರೂ.ಗಳನ್ನು ಪಾವತಿಸಬೇಕು, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸುವ ಬಗ್ಗೆ ತಿಳಿಸಲಾಗಿದೆ ಎಂದು ದಿಲ್ನೂರ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
“ಈ ಕುರಿತ ತನಿಖೆ ಆರಂಭಿಸಿದ್ದೇವೆ. ಕರೆಗಳ ವಿವರ ಮತ್ತು ಆಡಿಯೊ ಸಂದೇಶಗಳನ್ನು ಪರಿಶೀಲಿಸುತ್ತಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.