ಗುಜರಾತ್ | ಕಛ್ ಜಿಲ್ಲೆಯಲ್ಲಿ 4.1 ತೀವ್ರತೆಯ ಭೂಕಂಪನ
ಸಾಂದರ್ಭಿಕ ಚಿತ್ರ (PTI)
ಅಹಮದಾಬಾದ್: ಶನಿವಾರ ನಸುಕಿನಲ್ಲಿ ಗುಜರಾತ್ ನ ಕಛ್ ಜಿಲ್ಲೆಯಲ್ಲಿ 4.1 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಸ್ಥಳೀಯರು ಭಯಭೀತರಾಗಿರುವ ಘಟನೆ ನಡೆದಿದೆ. ಆದರೆ, ಈ ಘಟನೆಯಲ್ಲಿ ಯಾವುದೇ ಸಾವು-ನೋವುಗಳ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಮುಂಜಾನೆ 1.22 ಗಂಟೆಗೆ ಈ ಭೂಕಂಪನ ಸಂಭವಿಸಿದ್ದು, ಕಛ್ ಜಿಲ್ಲೆಯ ಈಶಾನ್ಯ ಖಾವ್ಡಾದಿಂದ 55 ಕಿಮೀ ದೂರದಲ್ಲಿ ಭೂಕಂಪನ ಕೇಂದ್ರ ಬಿಂದು ಕೇಂದ್ರೀಕೃತವಾಗಿತ್ತು ಎಂದು ಗಾಂಧಿನಗರ ಮೂಲದ ಭೂಕಂಪನ ಶಾಸ್ತ್ರ ಸಂಶೋಧನಾ ಸಂಸ್ಥೆ ಹೇಳಿದೆ.
ಈ ಘಟನೆಯಲ್ಲಿ ಇದುವರೆಗೆ ಯಾವುದೇ ಸಾವು-ನೋವು ಅಥವಾ ಆಸ್ತಿ-ಪಾಸ್ತಿ ಹಾನಿಯ ವರದಿಯಾಗಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ತಿಳಿಸಿದ್ದಾರೆ.
ಕಛ್ ಜಿಲ್ಲೆ ತೀವ್ರ ಭೂಕಂಪನ ವಲಯದಲ್ಲಿದ್ದು, ಅಲ್ಲಿ ನಿಯಮಿತವಾಗಿ ಸಣ್ಣ ಪ್ರಮಾಣದ ತೀವ್ರತೆಯ ಭೂಕಂಪನಗಳು ಸಂಭವಿಸುತ್ತಲೇ ಇರುತ್ತವೆ.
2001ರಲ್ಲಿ ಕಛ್ ಜಿಲ್ಲೆಯಲ್ಲಿ ಸಂಭವಿಸಿದ್ದ ಭೂಕಂಪನ ಕಳೆದ ಎರಡು ಶತಮಾನಗಳಲ್ಲಿ ಭಾರತದಲ್ಲಿ ಸಂಭವಿಸಿದ ಮೂರನೆಯ ಅತಿ ದೊಡ್ಡ ಹಾಗೂ ಎರಡನೆ ಅತಿ ದೊಡ್ಡ ವಿಪತ್ತುಕಾರಿ ಭೂಕಂಪನವಾಗಿದೆ.
ಜನವರಿ 26, 2001ರಂದು 7.6 ತೀವ್ರತೆಯಲ್ಲಿ ಸಂಭವಿಸಿದ್ದ ಈ ಭೂಕಂಪನದ ಕೇಂದ್ರ ಬಿಂದು ಕಛ್ ಜಿಲ್ಲೆ ಬಳಿಯ ಭಚಾವು ಆಗಿತ್ತು. ಈ ಭೂಕಂಪನದಲ್ಲಿ ಸುಮಾರು 13,800 ಮಂದಿ ಮೃತಪಟ್ಟು, ದೊಡ್ಡ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯುಂಟಾಗಿತ್ತು.