ದುಬೈ-ಹೈದರಾಬಾದ್ ವಿಮಾನಕ್ಕೆ ಬಾಂಬ್ ಬೆದರಿಕೆ
ಎಮಿರೇಟ್ಸ್ ವಿಮಾನ | Photo Credit : PTI
ಹೈದರಾಬಾದ್, ಡಿ. 5: ದುಬೈ-ಹೈದರಾಬಾದ್ ಎಮಿರೇಟ್ಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಒಡ್ಡಿದ ಈಮೇಲ್ ಅನ್ನು ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶುಕ್ರವಾರ ಸ್ವೀಕರಿಸಿದೆ.
ಈ ಹಿನ್ನೆಲೆಯಲ್ಲಿ ವಿಮಾನ ಇಳಿದ ಬಳಿಕ ವಿಮಾನ ನಿಲ್ದಾಣ ಸ್ಥಾಪಿತ ಸುರಕ್ಷಾ ಶಿಷ್ಟಾಚಾರವನ್ನು ಅನುಸರಿಸಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಇಕೆ526 ವಿಮಾನ ದುಬೈಯಿಂದ ಮುಂಜಾನೆ 3.15ಕ್ಕೆ ಹಾರಾಟ ಆರಂಭಿಸಿತ್ತು. ಅದು ಬೆಳಗ್ಗೆ 8.30ಕ್ಕೆ ಇಲ್ಲಿ ಸುರಕ್ಷಿತವಾಗಿ ಇಳಿದಿದೆ ಎಂದು ಮೂಲಗಳು ತಿಳಿಸಿವೆ.
‘‘ದುಬೈಯಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಇಕೆ526 ವಿಮಾನಕ್ಕೆ ಬೆದರಿಕೆ ಒಡ್ಡಿದ ಇಮೇಲ್ ಅನ್ನು ಹೈದರಾಬಾದ್ ವಿಮಾನ ನಿಲ್ದಾಣದ ಗ್ರಾಹಕ ನೆರವು ಐಡಿ 2025 ಡಿಸೆಂಬರ್ 5ರಂದು ಬೆಳಗ್ಗೆ 7.30ಕ್ಕೆ ಸ್ವೀಕರಿಸಿತ್ತು. ಆದರೆ, ವಿಮಾನ ಹೈದರಾಬಾದ್ ನಲ್ಲಿ ಬೆಳಗ್ಗೆ 8.30ಕ್ಕೆ ಸುರಕ್ಷಿತವಾಗಿ ಇಳಿಯಿತು. ಸ್ಥಾಪಿತ ಸುರಕ್ಷಿತ ಶಿಷ್ಟಾಚಾರವನ್ನು ಅನುಸರಿಸಲಾಯಿತು’’ ಎಂದು ಮೂಲಗಳು ತಿಳಿಸಿವೆ.
ಗುರುವಾರ ವಿಮಾನ ನಿಲ್ದಾಣ ಇಂಡಿಗೊದ ಮದಿನಾ-ಹೈದರಾಬಾದ್ ಹಾಗೂ ಶಾರ್ಜಾ-ಹೈದರಾಬಾದ್ ವಿಮಾನಗಳನ್ನು ಪ್ರತ್ಯೇಕವಾಗಿ ಗುರಿಯಾಗಿರಿಸಿದ ಇದೇ ರೀತಿಯ ಎರಡು ಇಮೇಲ್ ಗಳನ್ನು ಸ್ವೀಕರಿಸಿತ್ತು. ಅನಂತರ ಮದಿನಾ-ಹೈದರಾಬಾದ್ ವಿಮಾನವನ್ನು ಅಹ್ಮದಾಬಾದ್‌ಗೆ ಪಥ ಬದಲಾಯಿಸಲಾಗಿತ್ತು.