ದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಮತಗಳ್ಳತನವನ್ನು ಮುಚ್ಚಿ ಹಾಕಲು ಚುನಾವಣಾ ಆಯೋಗ ಯತ್ನಿಸುತ್ತಿದೆ: ಆಪ್ ಆರೋಪ
ಸೌರಭ್ ಭಾರದ್ವಾಜ್ (File Photo: PTI)
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಶನಿವಾರ ಆಮ್ ಆದ್ಮಿ ಪಕ್ಷ ಆರೋಪಿಸಿದ್ದು, ಅಳಿಸಿ ಹಾಕಲಾಗಿರುವ ಮತದಾರರ ಕುರಿತ ಮಾಹಿತಿಯನ್ನು ತಡೆಹಿಡಿಯುವ ಮೂಲಕ, ಮತಗಳ್ಳತನವನ್ನು ಮುಚ್ಚಿ ಹಾಕಲು ಚುನಾವಣಾ ಆಯೋಗ ಯತ್ನಿಸುತ್ತಿದೆ ಎಂದು ದೂರಿದೆ.
ಕರ್ನಾಟಕದಲ್ಲಿ ಮತಪಟ್ಟಿಯಿಂದ ವ್ಯವಸ್ಥಿತವಾಗಿ ಮತದಾರರ ಹೆಸರನ್ನು ಅಳಿಸಿ ಹಾಕುವ ಪ್ರಯತ್ನ ನಡೆದಿತ್ತು ಹಾಗೂ ಈ ಕೃತ್ಯ ನಡೆಸಿದ್ದ ಆರೋಪಿಗಳನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪಾದಿಸಿದ ಬೆನ್ನಲ್ಲೇ ಆಪ್ ಪಕ್ಷ ಕೂಡಾ ಮತಗಳ್ಳತನದ ಆರೋಪ ಮಾಡಿದೆ.
ಆದರೆ, ರಾಹುಲ್ ಗಾಂಧಿ ಅವರ ಆರೋಪಗಳನ್ನು ನಿರಾಧಾರ ಹಾಗೂ ಸತ್ಯಕ್ಕೆ ದೂರ ಎಂದು ಚುನಾವಣಾ ಆಯೋಗ ತಳ್ಳಿ ಹಾಕಿತ್ತು.
ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಿಲ್ಲಿ ಆಮ್ ಆದ್ಮಿ ಪಕ್ಷ ಘಟಕದ ಅಧ್ಯಕ್ಷ ಸೌರಭ್ ಭಾರದ್ವಾಜ್, ಫೆಬ್ರವರಿ ತಿಂಗಳಲ್ಲಿ ಬಿಜೆಪಿಯ ಪರ್ವೇಶ್ ಸಾಹಿಬ್ ಸಿಂಗ್, ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹಾಗೂ ಕಾಂಗ್ರೆಸ್ ಪಕ್ಷದ ಸಂದೀಪ್ ದೀಕ್ಷಿತ್ ನಡುವೆ ನಿಕಟ ಪೈಪೋಟಿ ನಡೆದಿದ್ದ ಪ್ರತಿಷ್ಠಿತ ಹೊಸದಿಲ್ಲಿ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದರು.
ಮತದಾರರ ಅಳಿಸುವಿಕೆ ನಕಲಿ ಪ್ರಕರಣಗಳ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ನಾವು ಚುನಾವಣಾ ಆಯೋಗಕ್ಕೆ ಮನವಿ ಪತ್ರಗಳನ್ನು ಸಲ್ಲಿಸಿದ್ದೇವೆ. ಆದರೆ, ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಈ ಅರ್ಜಿಯು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಯನ್ನು ಒಳಗೊಂಡಿಲ್ಲ. ಹೀಗಾಗಿ ಮಾಹಿತಿ ನೀಡುವುದರಿಂದ ವಿನಾಯಿತಿ ನೀಡಲಾಗಿದೆ ಎಂಬ ಉತ್ತರವನ್ನು ಚುನಾವಣಾ ಆಯೋಗ ನೀಡಿದೆ ಎಂದು ಅವರು ಆಪಾದಿಸಿದರು.
“ಮುಖ್ಯ ಚುನಾವಣಾ ಆಯುಕ್ತರ ಪಾತ್ರ ಸಂಶಯಾಸ್ಪದವಾಗಿದೆ ಎಂಬುದನ್ನು ಇದು ತೋರಿಸುತ್ತಿದೆ. ಮತಗಳ್ಳತನವನ್ನು ಮುಚ್ಚಿ ಹಾಕಲು ಇಡೀ ಚುನಾವಣಾ ಆಯೋಗ ಪ್ರಯತ್ನಿಸುತ್ತಿದೆ” ಎಂದು ಅವರು ದೂರಿದರು.
ಇದಕ್ಕೂ ಮುನ್ನ, ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದಿದ್ದ ಹಲವು ಪತ್ರಗಳು ಹಾಗೂ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗಳಿಗೆ ಉತ್ತರ ದೊರೆತಿಲ್ಲ ಎಂದು ಶುಕ್ರವಾರ ಆಪ್ ಆರೋಪಿಸಿತ್ತು.