ಪಿಎಂಎಲ್‌ಎ ದೂರನ್ನು ವಿಶೇಷ ನ್ಯಾಯಾಲಯ ಪರಿಗಣಿಸಿದ ನಂತರ ಈಡಿ ಆರೋಪಿಯನ್ನು ಬಂಧಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ದೂರನ್ನು ವಿಶೇಷ ಕೋರ್ಟ್ ಗಣನೆಗೆ ತೆಗೆದುಕೊಂಡಿದ್ದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಇದರ ಸೆಕ್ಷನ್ 19 ಅಡಿಯಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಬಳಸಿಕೊಂಡು ಜಾರಿ ನಿರ್ದೇಶನಾಲಯ ಮತ್ತು ಅದರ ಅಧಿಕಾರಿಗಳು ಆರೋಪಿಯೊಬ್ಬನನ್ನು ಬಂಧಿಸಲು ಸಾಧ್ಯವಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ನೀಡಿದೆ.
ಇಂತಹ ಪ್ರಕರಣದ ಆರೋಪಿಯ ಕಸ್ಟಡಿ ಬೇಕಿದ್ದಲ್ಲಿ ಜಾರಿ ನಿರ್ದೇಶನಾಲಯವು ವಿಶೇಷ ಕೋರ್ಟಿಗೆ ಅರ್ಜಿ ಸಲ್ಲಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದೇ ಅಪರಾಧ ಪ್ರಕರಣದಲ್ಲಿ ವಿಸ್ತ್ರತ ತನಿಖೆಯನ್ನು ಕೈಗೊಳ್ಳಲು ಈಡಿ ಬಯಸಿದ್ದಲ್ಲಿ, ದೂರಿನಲ್ಲಿ ಆರೋಪಿ ಎಂದು ಉಲ್ಲೇಖಿಸದ ವ್ಯಕ್ತಿಯನ್ನು ಬಂಧಿಸಬೇಕಿದ್ದಲ್ಲಿ ಸೆಕ್ಷನ್ 19 ಅಡಿಯಲ್ಲಿನ ಅವಶ್ಯಕತೆಗಳನ್ನು ಪೂರೈಸಬೇಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೂರು ದಾಖಲಿಸುವ ತನಕ ಈಡಿ ಆರೋಪಿಯನ್ನು ಬಂಧಿಸಿರದೇ ಇದ್ದಲ್ಲಿ, ದೂರನ್ನು ವಿಶೇಷ ನ್ಯಾಯಾಲಯ ಪರಿಗಣಿಸಿ ಆರೋಪಿಗೆ ಸಮನ್ಸ್ ಜಾರಿಗೊಳಿಸಬೇಕು, ವಾರಂಟ್ ಅಲ್ಲ. ಆರೋಪಿ ಜಾಮೀನಿನ ಮೇಲಿದ್ದರೂ ಸಮನ್ಸ್ ಜಾರಿಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಮನ್ಸ್‌ಗೆ ಸ್ಪಂದಿಸಿ ಆರೋಪಿ ವಿಶೇಷ ನ್ಯಾಯಾಲಯಕ್ಕೆ ಹಾಜರಾದಲ್ಲಿ, ಆತ ಕಸ್ಟಡಿಯಲ್ಲಿದ್ದಾನೆಂದು ಪರಿಗಣಿಸುವ ಹಾಗಿಲ್ಲ. ಇಂತಹ ಸಂದರ್ಭದಲ್ಲಿ ಆರೋಪಿ ಜಾಮೀನಿಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಆದರೆ ಆರೋಪಿಗೆ ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 88 ಅಡಿ ಬಾಂಡ್ ನೀಡಲು ವಿಶೇಷ ನ್ಯಾಯಾಲಯ ಆದೇಶಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಒಂದು ವೇಳೆ ಆರೋಪಿ ಹಾಜರಾಗದೇ ಇದ್ದರೆ ವಿಶೇಷ ನ್ಯಾಯಾಲಯವು ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 70 ಅಡಿಯಲ್ಲಿ ವಾರಂಟ್ ಜಾರಿಗೊಳಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಸಮನ್ಸ್ ನಂತರ ಹಾಜರಾಗಿದ್ದ ಆರೋಪಿ ಸಮನ್ಸ್ ನಂತರ ಬಂಧಿಸಬಹುದೆಂಬ ಭಯದಿಂದ ಹೈಕೋರ್ಟಿಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಸಂದರ್ಭ ನಿರೀಕ್ಷಣಾ ಜಾಮೀನು ನಿರಾಕರಿಸಲಾಗಿತ್ತು. ಪಿಎಂಎಲ್‌ಎ ಇದರ ಸೆಕ್ಷನ್ 45 ಇದರ ಎರಡನೇ ಷರತ್ತಿನಂತೆ ಆರೋಪಿಯು ತಪ್ಪಿತಸ್ಥನಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆಯಾಗಲು ಸಾಕಷ್ಟು ಕಾರಣಗಳಿವೆ ಹಾಗೂ ಜಾಮೀನು ದೊರೆತ ನಂತರ ಯಾವುದೇ ಅಪರಾಧವೆಸಗುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಲ್ಲ ಎಂಬ ಕಾರಣಕ್ಕೆ ಜಾಮೀನು ನಿರಾಕರಿಸಲಾಗಿತ್ತು.