×
Ad

346 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ | ಮೂರು ರಾಜ್ಯಗಳಲ್ಲಿ ಈಡಿ ಶೋಧ ಕಾರ್ಯಾಚರಣೆ

Update: 2025-09-10 20:29 IST

ಈಡಿ | PC : Enforcement Directorate

ಹೊಸದಿಲ್ಲಿ,ಸೆ.10: ಗುರುಗ್ರಾಮದ ಹೈಥ್ರೋ ಪವರ್ ಕಾರ್ಪೊರೇಷನ್ ಲಿ.(ಎಚ್‌ಪಿಸಿಎಲ್) ಮತ್ತು ಅದರ ಪ್ರವರ್ತಕರಿಂದ 346 ಕೋ.ರೂ.ಗಳ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು(ಈಡಿ) ಬುಧವಾರ ದಿಲ್ಲಿ-ಎನ್‌ಸಿಆರ್, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ದಿವಾಳಿ ಹಂತದಲ್ಲಿರುವ ಎಚ್‌ಪಿಸಿಎಲ್, ಅದರ ನಿರ್ದೇಶಕರಾದ ಅಮುಲ್ ಗಬ್ರಾನಿ ಮತ್ತು ಅಜಯ್ ಕುಮಾರ್ ಬಿಷ್ಣೋಯಿ ಹಾಗೂ ಇತರ ಕೆಲವರ ವಿರುದ್ಧ ಈಡಿ ತನಿಖೆ ನಡೆಸುತ್ತಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈಡಿ ದಾಖಲಿಸಿಕೊಂಡಿರುವ ಪ್ರಕರಣವು ಫೆ.2025ರ ಸಿಬಿಐ ಎಫ್‌ಐಆರ್‌ ಅನ್ನು ಆಧರಿಸಿದೆ. ಕಂಪೆನಿಯ ಪ್ರವರ್ತಕರು ಸಾಲದ ಹಣವನ್ನು ತಮಗೆ ಸಂಬಂಧಿಸಿದ ಕೆಲವು ಸಂಸ್ಥೆಗಳಿಗೆ ವರ್ಗಾಯಿಸುವ ಮೂಲಕ ಬ್ಯಾಂಕುಗಳಿಗೆ ನಷ್ಟವನ್ನುಂಟು ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಬುಧವಾರ ಈಡಿ ಅಧಿಕಾರಿಗಳು ದಿಲ್ಲಿ-ಎನ್‌ಸಿಆರ್‌ನ ಐದು, ಬೆಂಗಳೂರಿನ ಒಂದು ಮತ್ತು ಚೆನ್ನೈನ ಮೂರು ಕಡೆಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ.

ಪ್ರಕರಣದ ವಿವರಗಳ ಪ್ರಕಾರ ದೂರುದಾರ ಬ್ಯಾಂಕುಗಳು ಘೋಷಿಸಿರುವ ವಂಚನೆಗಳ ಮೊತ್ತ 346.08 ಕೋ.ರೂ.ಗಳಾಗಿದ್ದು,2009 ಮತ್ತು 2015ರ ನಡುವೆ ವಂಚನೆ ನಡೆದಿತ್ತೆನ್ನಲಾಗಿದೆ.

ವಿದ್ಯುತ್ ಪ್ರಸರಣ ಮತ್ತು ವಿತರಣೆ ಕ್ಷೇತ್ರದ ಕಂಪೆನಿಯಾಗಿರುವ ಎಚ್‌ಪಿಸಿಎಲ್ ವಿದ್ಯುತ್ ಪ್ರಸರಣ ಮಾರ್ಗಗಳಿಗೆ ಟರ್ನ್ ಕೀ ಯೋಜನೆಗಳ ವಿನ್ಯಾಸ, ತಯಾರಿಕೆ ಮತ್ತು ನಿರ್ಮಾಣದಲ್ಲಿ ತೊಡಗಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News