ಜಾರ್ಖಂಡ್ | ಯುವತಿಯ ಅತ್ಯಾಚಾರ ಆರೋಪ; ಯೋಧನ ಬಂಧನ
ಸಾಂದರ್ಭಿಕ ಚಿತ್ರ | Photo Credit : freepik
ರಾಂಚಿ, ಡಿ. 20: ಇಪ್ಪತ್ತೆರೆಡು ವರ್ಷದ ಯುವತಿಯನ್ನು ಅತ್ಯಾಚಾರ ಎಸಗಿದ ಆರೋಪದಲ್ಲಿ ಯೋಧನೋರ್ವನನ್ನು ಜಾರ್ಖಂಡ್‌ನ ರಾಂಚಿಯಿಂದ ಬಂಧಿಸಲಾಗದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಈ ಘಟನೆ ಟಾಟಿಸಿಲವೆ ರೈಲು ನಿಲ್ದಾಣದಲ್ಲಿ ಗುರುವಾರ ಸಂಜೆ ಸುಮಾರು 5.30ಕ್ಕೆ ನಡೆದಿದೆ. ಯುವತಿ ರೈಲು ಹತ್ತಲು ಕಾಯುತ್ತಿದ್ದರು ಎಂದು ಅವರು ಹೇಳಿದ್ದಾರೆ.
42 ವರ್ಷದ ಯೋಧ ಯುವತಿಯನ್ನು ರೈಲಿನ ಖಾಲಿ ಬೋಗಿಯೊಳಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ಯೋಧ ರಕ್ಷಣಾ ಸಾಮಗ್ರಿಗಳನ್ನು ಸಾಗಿಸುವ ರೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಅಪರಾಧ ಎಸಗುವ ಸಂದರ್ಭ ಪಾನಮತ್ತನಾಗಿದ್ದ’’ ಎಂದು ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಯೋಧ ಉತ್ತರಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯ ಸರ್ಹಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ. ಆತನನ್ನು ಪಂಜಾಬ್ ಪಟಿಯಾಲದಲ್ಲಿರುವ 42 ಮೀಡಿಯಂ ರೆಜಿಮೆಂಟ್ ಗೆ ನಿಯೋಜಿಸಲಾಗಿತ್ತು.
ಯುವತಿ ರಕ್ಷಿಸುವಂತೆ ಕೂಗಿಕೊಂಡಾಗ ಜನರು ರೈಲು ನಿಲ್ದಾಣದಲ್ಲಿ ಸೇರಿದರು ಹಾಗೂ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಈ ಸಂದರ್ಭ ಪರಾರಿಯಾಗಲು ಯತ್ನಿಸಿದ ಯೋಧನನ್ನು ಬಂಧಿಸಿದರು.
ಯುವತಿಯ ಹೇಳಿಕೆಯ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.