Uttar Pradesh | ವೈದ್ಯಕೀಯೇತರ ಬಳಕೆಗಾಗಿ ಕೆಮ್ಮು ಸಿರಪ್ ಕಳ್ಳಸಾಗಣೆ ಆರೋಪ; 75 ಬಂಧನ
ಸಾಂದರ್ಭಿಕ ಚಿತ್ರ | Photo Credit : freepik
ಲಕ್ನೋ, ಡಿ. 20: ಉತ್ತರಪ್ರದೇಶದ 31 ಜಿಲ್ಲೆಗಳಲ್ಲಿ ಕೊಡೀನ್ ನಿಂದ ತಯಾರಿಸಲಾಗಿರುವ ಕೆಮ್ಮು ಸಿರಪ್ ನ ಅಕ್ರಮ ಸಂಗ್ರಹ ಮತ್ತು ಮಾರಾಟಕ್ಕೆ ಸಂಬಂಧಿಸಿ 74 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು 75 ಜನರನ್ನು ಬಂಧಿಸಲಾಗಿದೆ ಎಂದು ರಾಜ್ಯದ ಸಂಸದೀಯ ವ್ಯವಹಾರಗಳು ಮತ್ತು ಹಣಕಾಸು ಸಚಿವ ಸುರೇಶ್ ಖನ್ನಾ ಶನಿವಾರ ತಿಳಿಸಿದ್ದಾರೆ.
ಔಷಧವನ್ನು ವೈದ್ಯಕೀಯೇತರ ಬಳಕೆಗಾಗಿ ಬೃಹತ್ ಪ್ರಮಾಣದಲ್ಲಿ ಕಳ್ಳಸಾಗಾಣಿಕೆ ಮಾಡಿರುವ ಆರೋಪದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಶಹಜಾನ್‌ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಳಿಯ ವೇಳೆ 12.65 ಲಕ್ಷ ಬಾಟಲಿ ಕೊಡೀನ್‌ನಿಂದ ತಯಾರಿಸಲಾಗಿರುವ ಕೆಮ್ಮು ಸಿರಪ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. ಅದೇ ವೇಳೆ, 132 ಕಂಪೆನಿಗಳ ವಿರುದ್ಧ ಕಾನೂನು ಕ್ರಮವನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಬಂಧಿತರಾದವರು ಒಂದು ಹಂತದಲ್ಲಿ ಸಮಾಜವಾದಿ ಪಕ್ಷದೊಂದಿಗೆ ನಂಟು ಹೊಂದಿದ್ದಾರೆ ಎಂದು ಅವರು ಆರೋಪಿಸಿದರು.
ಈ ಹಗರಣದ ಬಗ್ಗೆ ತನಿಖೆ ನಡೆಸಲು ಪೊಲೀಸ್ ಮಹಾ ನಿರ್ದೇಶಕ ದರ್ಜೆಯ ಅಧಿಕಾರಿಯೊಬ್ಬರ ನೇತೃತ್ವದ ವಿಶೇಷ ತನಿಖಾ ತಂಡ (ಸಿಟ್)ವೊಂದನ್ನು ರಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
15 ಪಿತೂರಿಗಾರರ ವಿರುದ್ಧ ಸಿಟ್ ಕ್ರಮ ತೆಗೆದುಕೊಂಡಿದೆ ಹಾಗೂ ಇತರ ಆರೋಪಿಗಳನ್ನು ಗುರುತಿಸಲಾಗಿದೆ ಎಂದರು.
ಕೊಡೀನ್ ಆಧಾರಿತ ಕೆಮ್ಮು ಸಿರಪ್ ತಯಾರಿಕಾ ಕಂಪೆನಿಗಳು ಪೂರೈಸುವ ಸಿರಪ್ ತಳಮಟ್ಟದಲ್ಲಿರುವ ಚಿಲ್ಲರೆ ಮಾರಾಟ ವೈದ್ಯಕೀಯ ಅಂಗಡಿಗಳಿಗೆ ತಲುಪುತ್ತಿರಲಿಲ್ಲ ಎನ್ನುವುದು ತನಿಖೆಯಿಂದ ಬಹಿರಂಗವಾಗಿದೆ ಎಂದು ಸಚಿವರು ತಿಳಿಸಿದರು.
ಬದಲಿಗೆ, ಬೃಹತ್ ಪ್ರಮಾಣದ ಸಿರಪನ್ನು ವೈದ್ಯಕೀಯೇತರ ಉದ್ದೇಶಕ್ಕಾಗಿ ಬಳಸಲು ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಆರೋಪಿಸಿದರು. ಸಿರಪನ್ನು ನೇಪಾಳ ಮತ್ತು ಬಾಂಗ್ಲಾದೇಶಕ್ಕೆ ಕಳ್ಳಸಾಗಾಣಿಕೆ ಮಾಡಿರುವ ಸಾಧ್ಯತೆಯಿದೆ ಎಂದು ಅವರು ನುಡಿದರು.