×
Ad

ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ | ಚುನಾವಣಾ ಆಯೋಗದಿಂದ ಹಿಂಬಾಗಿಲಿನಿಂದ ಎನ್‌ಆರ್‌ಸಿ ಜಾರಿಗೊಳಿಸುವ ಸಂಚು; ವಿರೋಧ ಪಕ್ಷಗಳ ಆಕ್ರೋಶ

Update: 2025-06-28 21:09 IST

ಚುನಾವಣಾ ಆಯೋಗ | PC : PTI 

ಹೊಸದಿಲ್ಲಿ: ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಆರಂಭಿಸಿರುವ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ಹಿಂಬಾಗಿಲ ಮೂಲಕ ಜಾರಿಗೊಳಿಸುವ ದುಷ್ಟ ಸಂಚು ಇದಾಗಿದೆಯೆಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಆಪಾದಿಸಿದೆ. ಚುನಾವಣಾ ಆಯೋಗದ ಈ ನಡೆಯನ್ನು, ಹಿಟ್ಲರ್‌ನ ನಾಝಿ ಆಡಳಿತವು ಜರ್ಮನರ ಜನಾಂಗೀಯ ಪರಿಶುದ್ಧತೆಯನ್ನು ದೃಢಪಡಿಸಲು ನೀಡುತ್ತಿದ್ದ ‘ ವಂಶಪಾರಂಪರ್ಯದ ಪುರಾವೆ ’ ಯ ಪ್ರಮಾಣ ಪತ್ರಕ್ಕೆ ಅದು ಹೋಲಿಸಿದೆ.

ಹೊಸದಿಲ್ಲಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಿಎಂಸಿ ನಾಯಕ ಡೆರೆಕ್ ಓಬ್ರಿಯಾನ್ ಅವರು, ಈ ವಿಷಯದಲ್ಲಿ ಇಂಡಿಯಾ ಮೈತ್ರಿಕೂಟದ ಎಲ್ಲಾ ಪಕ್ಷಗಳು ಒಗ್ಗಟ್ಟಾಗಿವೆ ಹಾಗೂ ಶೀಘ್ರದಲ್ಲೇ ಕ್ರಮವನ್ನು ಕೈಗೊಳ್ಳಲಿವೆ ಎಂದರು.

ಮತದಾರಪಟ್ಟಿಯ ತೀವ್ರ ಪರಿಷ್ಕರಣೆಗೆ ಚುನಾವಣಾ ಆಯೋಗ ಆಯ್ದುಕೊಂಡ ಸಮಯವನ್ನು ಕೂಡಾ ಓಬ್ರಿಯಾನ್ ಪ್ರಶ್ನಿಸಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳಿರುವಾಗ ಹಾಗೂ ಮುಂದಿನ ವರ್ಷದ ಆರಂಭದಲ್ಲಿ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆ ನಡೆಯುವುದಕ್ಕೆ ಮುಂಚಿತವಾಗಿ ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆಯನ್ನು ಚುನಾವಣಾ ಆಯೋಗ ಘೋಷಿಸಿರುವುದು, ಈ ಎರಡು ರಾಜ್ಯಗಳಲ್ಲಿ ಜಯಗಳಿಸುವ ಬಿಜೆಪಿಯ ಹತಾಶ ಪ್ರಯತ್ನವಾಗಿದೆ ಎಂದವರು ಹೇಳಿದ್ದಾರೆ.

ಎನ್‌ಆರ್‌ಸಿಯನ್ನು ಹಿಂಬಾಗಿಲ ಮೂಲಕ ಜಾರಿಗೊಳಿಸುವ ದುಷ್ಟ ನಡೆ ಇದಾಗಿದೆ ಎಂದು ರಾಜ್ಯಸಭಾದ ಟಿಎಂಸಿ ನಾಯಕರಾದ ಡೆರೆಕ್ ಬ್ರಿಯಾನ್ ಹೇಳಿದರು.

‘‘ 1935ರಲ್ಲಿ ನಾಝಿಗಳ ಆಡಳಿತದ ಜರ್ಮನಿಯಲ್ಲಿ, ಅಲ್ಲಿನ ಜರ್ಮನ್ ಪ್ರಜೆಗಳಿಗೆ ವಂಶಪಾರಂಪರ್ಯದ ಪುರಾವೆಯ ಪ್ರಮಾಣಪತ್ರವನ್ನು ನೀಡಲಾಗುತ್ತಿತ್ತು. ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆ ಕೂಡಾ ನಾಜಿಗಳ ವಂಶಪಾರಂಪರ್ಯದ ಪ್ರಮಾಣಪತ್ರದ ಹೊಸ ಆವೃತ್ತಿಯೇ’’ ಎಂದವರು ಪ್ರಶ್ನಿಸಿದರು.

‘‘ಈ ಪ್ರಕ್ರಿಯೆಯನ್ನು ಯಾಕೆ ಈಗ ಹಠಾತ್ತನೇ ಕೈಗೊಳ್ಳಲಾಗಿದೆ. ಮುಂದಿನ ವರ್ಷ ನಡೆಯುವ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಕೇವಲ 46-49 ಸ್ಥಾನಗಳನ್ನು ಮಾತ್ರವೇ ಗಳಿಸಲಿದೆ ಎಂಬುದು ಆ ಪಕ್ಷವು ನಡೆಸಿದ ಆಂತರಿಕ ಸಮೀಕ್ಷೆಯಿಂದ ಗೊತ್ತಾಗಿದೆ. ಹೀಗಾಗಿ ಪರಿಸ್ಥಿತಿಯನ್ನು ಬದಲಾಯಿಸುವುದಕ್ಕಾಗಿ ಇಂತಹ ಹತಾಶ ಪ್ರಯತ್ನಗಳನ್ನು ಅದು ನಡೆಸುತ್ತಿದೆ ’’ ಎಂದು ಡೆರೆಕ್ ಬ್ರಿಯಾನ್ ಹೇಳಿದರು.

ಇಂಡಿಯಾ ಮೈತ್ರಿಕೂಟದ ಎಲ್ಲಾ ಪಕ್ಷಗಳು ಸಂಸತ್‌ನ ಒಳಗೆ ಹಾಗೂ ಹೊರಗೆ ಈ ವಿಷಯವಾಗಿ ಹೋರಾಡಲಿದೆ. ಆದರೆ ಈ ಹೋರಾಟಕ್ಕಾಗಿ ಸಂಸತ್ ಅಧಿವೇಶನದ ಆರಂಭವನ್ನು ಕಾಯುತ್ತಾ ಕೂರಲು ಸಾಧ್ಯವಿಲ್ಲ. ಸಂಸತ್ ಅಧಿವೇಶನ ನಡೆಯುತ್ತಿಲ್ಲವಾದರೂ, ಈ ವಿಷಯವಾಗಿ ಇಂಡಿಯಾ ಮೈತ್ರಿಕೂಟದ ಎಲ್ಲಾ ಪಕ್ಷಗಳು ಸಮನ್ವಯವನ್ನು ಹೊಂದಿವೆ ಎಂದರು.

ಚುನಾವಣಾ ಆಯೋಗವು ಶನಿವಾರ ನೀಡಿದ ಹೇಳಿಕೆಯೊಂದರಲ್ಲಿ, ಪ್ರತಿಯೊಬ್ಬ ಮತದಾರನ ಅರ್ಹತೆಯನ್ನು ದೃಢಪಡಿಸಲು ಎಲ್ಲಾ ರಾಜಕೀಯ ಪಕ್ಷಗಳ ಭಾಗವಹಿಸುವಿಕೆಯೊಂದಿಗೆ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯನ್ನು ನಡೆಸಲಾಗುವುದು ಎಂದರು.

ಭಾರತದ ಸಂವಿಧಾನವು ಸರ್ವೋನ್ನತವಾಗಿದೆ. ಎಲ್ಲಾ ಪೌರರು, ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಆಯೋಗವು ಸಂವಿಧಾನವನ್ನು ಆನುಸರಿಸಬೇಕಾಗಿದೆ’’ ಎಂದು ಅದು ಹೇಳಿದೆ.

► ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆಗೆ ಪ್ರತಿಪಕ್ಷಗಳ ವಿರೋಧ

ಮತದಾರಪಟ್ಟಿಯ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಮೂಲಕ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ನಿರ್ದಿಷ್ಟ ಮತದಾರರನ್ನು ಉದ್ದೇಶಪೂರ್ವಕವಾಗಿ ಹೊರಗಿಡುವ ಅಪಾಯವಿದೆ ಎಂದು ಕಾಂಗ್ರೆಸ್, ಟಿಎಂಸಿ ಮತ್ತಿತರ ಪ್ರತಿಪಕ್ಷಗಳು ಆತಂಕ ವ್ಯಕ್ತಪಡಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News