×
Ad

ಖರ್ಗೆ ಬಿಹಾರ ರ‍್ಯಾಲಿಯಲ್ಲಿ ಖಾಲಿ ಕುರ್ಚಿಗಳು: ಅಧಿಕ ತಾಪಮಾನ ಕಾರಣ ಎಂದ ಕಾಂಗ್ರೆಸ್ ಮುಖಂಡ

Update: 2025-04-22 19:01 IST

ಮಲ್ಲಿಕಾರ್ಜುನ ಖರ್ಗೆ | PTI

ಬಕ್ಸರ್ (ಬಿಹಾರ): ಬಿಹಾರ ವಿಧಾನಸಭಾ ಚುನಾವಣೆಗಾಗಿನ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಬಿರುಸುಗೊಂಡಿದ್ದು, ಬಕ್ಸರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜನೆಗೊಂಡಿದ್ದ ಸಮಾವೇಶದಲ್ಲಿ ಖಾಲಿ ಕುರ್ಚಿಗಳು ಕಂಡು ಬಂದ ಹಿನ್ನೆಲೆಯಲ್ಲಿ, ಸಂಘಟನಾ ನಿಷ್ಕ್ರಿಯತೆ ಆರೋಪದ ಮೇಲೆ ಬಕ್ಸರ್ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ಮನೋಜ್ ಕುಮಾರ್ ಪಾಂಡೆಯನ್ನು ಸೋಮವಾರ ಕಾಂಗ್ರೆಸ್ ಅಮಾನತುಗೊಳಿಸಿದೆ.

ತಮ್ಮ ಅಮಾನತು ಆದೇಶದ ಕುರಿತು ಪ್ರತಿಕ್ರಿಯಿಸಿದ ಮನೋಜ್ ಕುಮಾರ್ ಪಾಂಡೆ, ಬಕ್ಸರ್ ಜಿಲ್ಲೆಯಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮಾವೇಶಕ್ಕೆ ಜನ ಸೇರದಿರಲು ವಿಪರೀತ ತಾಪಮಾನ ಕಾರಣ ಎಂದು ಸಮಜಾಯಿಷಿ ನೀಡಿದ್ದಾರೆ.

ಸಮಾವೇಶದಲ್ಲಿ ಪಾಲ್ಗೊಳ್ಳಲು ಜನರು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರೂ, ವಿಪರೀತ ಬಿಸಿಲಿನ ಝಳದ ಕಾರಣಕ್ಕೆ ಸಮಾವೇಶಕ್ಕೆ ಬಂದಿದ್ದ ಹಲವರು ನೆರಳನ್ನು ಆಶ್ರಯಿಸುವಂತಾಯಿತು ಎಂದು ಸೋಮವಾರ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುವ ಮನೋಜ್ ಕುಮಾರ್ ಪಾಂಡೆ ಸ್ಪಷ್ಟನೆ ನೀಡಿದ್ದಾರೆ.

"ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯ ಮುಂದೆ ಸಾಕಷ್ಟು ಜನಸಂದಣಿ ಇತ್ತು. ಈ ಬಗ್ಗೆ ನಮ್ಮ ಬಳಿ ವೀಡಿಯೊ ಪುರಾವೆ ಕೂಡಾ ಇದೆ. ಈ ಕುರಿತು ಮಲ್ಲಿಕಾರ್ಜುನ ಖರ್ಗೆ ಕೂಡಾ ಸಂತೋಷ ವ್ಯಕ್ತಪಡಿಸಿದ್ದರು. ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಸಂತಸದ ಲಯದಲ್ಲಿದ್ದರು. ಅವರ ಭಾಷಣ 50 ನಿಮಿಷಗಳ ಕಾಲ ನಡೆಯಿತು. ಆ ಭಾಷಣವು ಚಾರಿತ್ರಿಕ ಸಂಗತಿಗಳನ್ನು ಒಳಗೊಂಡಿತ್ತು. ಆದರೆ, ಸಮಾವೇಶದ ಹಿಂದಿನ ಸಾಲಿನಲ್ಲಿ ಯಾವುದೇ ಫ್ಯಾನ್ ವ್ಯವಸ್ಥೆ ಏರ್ಪಡಿಸಿರಲಿಲ್ಲ. ತಾಪಮಾನದ ಪ್ರಮಾಣ 42 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಜನರ ಸಹಜವಾಗಿಯೇ ಮರಗಳ ಬದಿಯ ನೆರಳಿನತ್ತ ನಡೆದರು. ಹೀಗಾಗಿ, ಕೆಲವು ಕುರ್ಚಿಗಳು ಖಾಲಿ ಕಂಡು ಬಂದವು" ಎಂದು ಅವರು ವಿವರಿಸಿದ್ದಾರೆ.

ಇದಕ್ಕೂ ಮುನ್ನ, 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ' ಸಮಾವೇಶದ ಆಯೋಜನೆಗೂ ಮುನ್ನ, ಸಮನ್ವಯತೆ ಸರಿಯಾಗಿರಲಿಲ್ಲ. ಸಮಾವೇಶಕ್ಕೆ ಸ್ಥಳೀಯರನ್ನು ಕರೆತರುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪಗಳನ್ನು ಆಧರಿಸಿ, ಸೋಮವಾರ ಬಕ್ಸರ್ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ಮನೋಜ್ ಕುಮಾರ್ ಪಾಂಡೆಯನ್ನು ಕಾಂಗ್ರೆಸ್ ಪಕ್ಷ ಅಮಾನತುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News