ಮಾಜಿ ಸಿಜೆಐ ಚಂದ್ರಚೂಡ್ ಅವರ ಹೊಸ ಮರ್ಸಿಡಿಸ್ ಕಾರಿಗೆ ವಿಶೇಷ ನೋಂದಣಿ ಸಂಖ್ಯೆ ಕೋರಿ ಸಾರಿಗೆ ಆಯುಕ್ತರಿಗೆ ಪತ್ರ!
ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (PTI)
ಹೊಸದಿಲ್ಲಿ : ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಖರೀದಿಸಿದ ಹೊಸ ಮರ್ಸಿಡಿಸ್-ಬೆನ್ಝ್ E220 ಕಾರಿಗೆ ವಿಶೇಷ ನೋಂದಣಿ ಸಂಖ್ಯೆಯನ್ನು ತ್ವರಿತವಾಗಿ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಅವರು ದಿಲ್ಲಿ ಸಾರಿಗೆ ಆಯುಕ್ತರಿಗೆ ಪತ್ರ ಬರೆದಿರುವ ಬಗ್ಗೆ ವರದಿಯಾಗಿದೆ.
ಜುಲೈ 28ರಂದು ಬರೆದ ಪತ್ರದಲ್ಲಿ, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಖರೀದಿಸಿದ ಮರ್ಸಿಡಿಸ್ ಕಾರಿಗೆ ನಿರ್ದಿಷ್ಟ ಸಂಖ್ಯೆಯ ನೋಂದಣಿ ಸಂಖ್ಯೆ ನೀಡುವಂತೆ ನಾನು ವಿನಂತಿಸುತ್ತೇನೆ. ಇದನ್ನು ತ್ವರಿತವಾಗಿ ಮಾಡಿ ನಮ್ಮೊಂದಿಗೆ ವಿವರಗಳನ್ನು ಹಂಚಿಕೊಂಡರೆ ಕೃತಜ್ಞನಾಗಿರುತ್ತೇನೆ ಎಂದು ಹೇಳಲಾಗಿದೆ. ನಿರ್ದಿಷ್ಟ ಸಂಖ್ಯೆಯ ನೋಂದಣಿ ಸಂಖ್ಯೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ದಿಲ್ಲಿಯಲ್ಲಿ ಮರ್ಸಿಡಿಸ್ ಬೆನ್ಝ್ ಇ-200 ಕಾರಿನ ಬೆಲೆ 90 ಲಕ್ಷದಿಂದ 95 ಲಕ್ಷದವರೆಗೆ ಇದೆ.
ನ್ಯಾಯಮೂರ್ತಿ ಚಂದ್ರಚೂಡ್ ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಅಧಿಕಾರಾವಧಿ 2024ರ ನವೆಂಬರ್ 10ರಂದು ಕೊನೆಗೊಂಡಿತ್ತು.
ಅವರು ಅಯೋಧ್ಯೆ ಭೂ ವಿವಾದ, 370ನೇ ವಿಧಿ ರದ್ಧತಿ, ಸಲಿಂಗಕಾಮವನ್ನು ಅಪರಾಧ ಮುಕ್ತಗೊಳಿಸುವುದು ಮುಂತಾದ ಮಹತ್ವದ ತೀರ್ಪು ನೀಡಿದ ಪೀಠದ ಭಾಗವಾಗಿದ್ದರು.