×
Ad

ಎಫ್-35 ಯುದ್ಧ ವಿಮಾನಗಳ ಖರೀದಿಗಾಗಿ ಅಮೆರಿಕದೊಂದಿಗೆ ಚರ್ಚೆ ನಡೆಸಿಲ್ಲ : ಕೇಂದ್ರ ಸರಕಾರ

Update: 2025-08-01 20:39 IST

PC : X 

ಹೊಸದಿಲ್ಲಿ,ಆ.1: ಈ ವರ್ಷದ ಫೆಬ್ರವರಿಯಲ್ಲಿ ವಾಷಿಂಗ್ಟನ್‌ ಗೆ ಪ್ರಧಾನಿ ನರೇಂದ್ರಮೋದಿಯವರ ಭೇಟಿಯ ಬಳಿಕ ಉಭಯ ದೇಶಗಳ ಜಂಟಿ ಹೇಳಿಕೆಯಲ್ಲಿ ಅಮೆರಿಕದಿಂದ ಎಫ್-35 ಐದನೇ ತಲೆಮಾರಿನ ಯುದ್ಧ ವಿಮಾನಗಳ ಖರೀದಿ ಸಾಧ್ಯತೆಯ ಬಗ್ಗೆ ಉಲ್ಲೇಖಿಸಲಾಗಿತ್ತಾದರೂ ಈ ಸಂಬಂಧ ಅಮೆರಿಕದೊಂದಿಗೆ ಯಾವುದೇ ಔಪಚಾರಿಕ ಚರ್ಚೆಗಳು ನಡೆದಿಲ್ಲ ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ತಿಳಿಸಿದೆ.

ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ಕೀರ್ತಿವರ್ಧನ ಸಿಂಗ್ ಅವರು ಕಾಂಗ್ರೆಸ್ ಸಂಸದ ಬಲವಂತ್ ಬಸವಂತ್ ವಾಂಖಡೆಯವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ, ಈ ವಿಷಯದ ಬಗ್ಗೆ ಇನ್ನೂ ಯಾವುದೇ ಔಪಚಾರಿಕ ಚರ್ಚೆಗಳು ನಡೆದಿಲ್ಲ ಎಂದು ತಿಳಿಸಿದರು.

ಈ ವರ್ಷದ ಆರಂಭದಲ್ಲಿ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆಯ ಬಳಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಕಟಣೆಯ ಬಳಿಕ ಅಮೆರಿಕವು ಎಫ್-35 ಯುದ್ಧ ವಿಮಾನಗಳ ಮಾರಾಟಕ್ಕಾಗಿ ಯಾವುದೇ ಅಧಿಕೃತ ಪ್ರಸ್ತಾವವನ್ನು ಭಾರತದ ಮುಂದಿಟ್ಟಿದೆಯೇ ಎಂದು ವಾಂಖಡೆ ಪ್ರಶ್ನಿಸಿದ್ದರು.

ಭಾರತ-ಅಮೆರಿಕ ಜಂಟಿ ಹೇಳಿಕೆಯಲ್ಲಿ,ಅಮೆರಿಕದಿಂದ ಎಫ್-35 ಮತ್ತು ಸಾಗರಗರ್ಭದಲ್ಲಿಯ ವ್ಯವಸ್ಥೆಗಳಂತಹ ಆಧುನಿಕ ಮಿಲಿಟರಿ ಉಪಕರಣಗಳನ್ನು ಭಾರತಕ್ಕೆ ಮಾರಾಟ ಮಾಡುವುದಕ್ಕೆ ಸಂಬಂಧಿಸಿ ನೀತಿಯ ಸಂಭಾವ್ಯ ಪರಿಶೀಲನೆಯನ್ನು ಉಲ್ಲೇಖಿಸಲಾಗಿತ್ತಾದರೂ, ವಾಸ್ತವದಲ್ಲಿ ಈ ಬಗ್ಗೆ ಯಾವುದೆ ಮಾತುಕತೆ ನಡೆದಿಲ್ಲ ಎನ್ನುವುದನ್ನು ಸಚಿವರ ಉತ್ತರವು ದೃಢಪಡಿಸಿದೆ.

ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇ.25ರಷ್ಟು ಸುಂಕ ಹೆಚ್ಚಳದ ಟ್ರಂಪ್ ಅವರ ಇತ್ತೀಚಿನ ಘೋಷಣೆಯ ವಿರುದ್ಧ ಯಾವುದೇ ತಕ್ಷಣದ ಪ್ರತೀಕಾರ ಕ್ರಮಗಳನ್ನು ಭಾರತವು ತಳ್ಳಿ ಹಾಕಿದೆ ಎಂದು ಅನಾಮಿಕ ಮೂಲಗಳನ್ನು ಉಲ್ಲೇಖಿಸಿ ಬ್ಲೂಮ್‌ ಬರ್ಗ್ ಗುರುವಾರ ವರದಿ ಮಾಡಿರುವ ಹಿನ್ನೆಲೆಯಲ್ಲಿ ಸರಕಾರದ ಈ ಸ್ಪಷ್ಟನೆ ಹೊರಬಿದ್ದಿದೆ.

ನೈಸರ್ಗಿಕ ಅನಿಲ,ಸಂವಹನ ಉಪಕರಣಗಳು ಮತ್ತು ಚಿನ್ನದಂತಹ ಸರಕುಗಳ ಆಮದುಗಳನ್ನು ಹೆಚ್ಚಿಸುವ ಮೂಲಕ ಅಮೆರಿಕ ಆಡಳಿತವನ್ನು ಸಮಾಧಾನಿಸಲು ಭಾರತವು ಆಯ್ಕೆಗಳನ್ನು ಅನ್ವೇಷಿಸುತ್ತಿದೆ. ಆದರೆ ಹೊಸದಾಗಿ ರಕ್ಷಣಾ ಖರೀದಿಗಳನ್ನು ಅದು ಪರಿಗಣಿಸುತ್ತಿಲ್ಲ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿತ್ತು.

ಟ್ರಂಪ್ ಅವರ ಸುಂಕ ಕ್ರಮವು ಭಾರತದ ಅಧಿಕಾರಿಗಳಿಗೆ ಆಘಾತ ಮತ್ತು ನಿರಾಶೆಯನ್ನುಂಟು ಮಾಡಿದೆ,ಅವರು ಈಗ ದ್ವಿಪಕ್ಷೀಯ ಮಾತುಕತೆಗಳನ್ನು ಸರಿಯಾದ ದಾರಿಯಲ್ಲಿ ಮುಂದುವರಿಸಲು ಶ್ರಮಿಸುತ್ತಿದ್ದಾರೆ ಎಂದೂ ವರದಿಯು ಹೇಳಿದೆ. ಭಾರತವು ಮುಂದಿನ ಕೆಲವು ವರ್ಷಗಳಲ್ಲಿ ಅಮೆರಿಕದೊಂದಿಗೆ ತನ್ನ ವ್ಯಾಪಾರ ಕೊರತೆಯನ್ನು ತಗ್ಗಿಸಲು ಪರಗಣಿಸಬಹುದಾದರೂ ಎಫ್-35 ಯುದ್ಧ ವಿಮಾನಗಳು ಸೇರಿಂತೆ ಯಾವುದೇ ಪ್ರಮುಖ ರಕ್ಷಣಾ ಖರೀದಿಗಳ ಬಗ್ಗೆ ಅದು ಯೋಚಿಸುತ್ತಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾದ ಮೂಲಗಳು ತಿಳಿಸಿವೆ.

ಎ.22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ-ಪಾಕ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪ್ರಯತ್ನಗಳಲ್ಲಿ ಅಮರಿಕದ ರಾಜತಾಂತ್ರಿಕರ ಪಾತ್ರದ ಕುರಿತು ವಿವರಗಳನ್ನು ಕೋರಿದ್ದ ವಾಂಖಡೆಯವರ ಪ್ರತ್ಯೇಕ ಪ್ರಶ್ನೆಗೆ ನೀಡದ ಉತ್ತರದಲ್ಲಿ ಸಿಂಗ್.ಎ.22 ಮತ್ತು ಮೇ 10ರ ನಡುವೆ ಭಾರತವು ಅಮೆರಿಕ ಸೇರಿದಂತೆ ಬಹು ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂವಹನಗಳಲ್ಲಿ ತೊಡಗಿಸಿಕೊಂಡಿತ್ತು ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News