×
Ad

ದೇಶದಲ್ಲೇ ಮೊದಲು: ಬಿಹಾರದ ಪ್ರತಿ ಮತಗಟ್ಟೆಯಲ್ಲಿ ಗರಿಷ್ಠ 1200 ಮತದಾರರು

Update: 2025-07-22 08:09 IST

PC: x.com/ttindia

ಹೊಸದಿಲ್ಲಿ: ಪ್ರತಿ ಮತಗಟ್ಟೆಯ ಗರಿಷ್ಠ ಮತದಾರರ ಮಿತಿಯನ್ನು 1200ಕ್ಕೆ ನಿಗದಿಪಡಿಸಿದ ದೇಶದ ಮೊದಲ ರಾಜ್ಯವಾಗಿ ಬಿಹಾರ ಹೊರಹೊಮ್ಮಿದೆ. ದೇಶಾದ್ಯಂತ ಪ್ರಸ್ತುತ ಮತಗಟ್ಟೆಗೆ ಗರಿಷ್ಠ 1500 ಮತದಾರರ ಮಿತಿ ಇದೆ. ಈ ಗರಿಷ್ಠ ಮಿತಿಯನ್ನು ಜಾರಿಗೊಳಿಸಿರುವ ಕಾರಣದಿಂದ ರಾಜ್ಯದಲ್ಲಿ ಹೆಚ್ಚುವರಿಯಾಗಿ 12,817 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಮುನ್ನ ರಾಜ್ಯದಲ್ಲಿದ್ದ ಮತಗಟ್ಟೆಗಳ ಸಂಖ್ಯೆ 77,895ರಿಂದ ಇದೀಗ 90,712ಕ್ಕೇರಲಿದೆ.

ಎಸ್ಐಆರ್ ಬಗೆಗಿನ ಇತ್ತೀಚಿನ ಮಾಹಿತಿಯಲ್ಲಿ ಚುನಾವಣಾ ಆಯೋಗ ಈ ಅಂಶವನ್ನು ಬಹಿರಂಗಪಡಿಸಿದೆ. ರಾಜ್ಯದ ಒಟ್ಟು 7.9 ಕೋಟಿ ಮತದಾರರ ಪೈಕಿ ಕೇವಲ 29.6 ಲಕ್ಷ ಮಂದಿ ಅಂದರೆ ಶೇಕಡ 3.8ರಷ್ಟು ಮಂದಿ ಮಾತ್ರ ಗಣತಿ ಅರ್ಜಿಗಳನ್ನು ಸಲ್ಲಿಸಬೇಕಿದೆ ಎಂದು ಆಯೋಗ ಹೇಳಿದೆ.

ಜೂನ್ 24ರ ಎಸ್ಐಆರ್ ಸೂಚನೆಯಂತೆ, ಗರಿಷ್ಠ 1200 ಮತದಾರರ ಮಿತಿಗೆ ಅನುಸಾರ ಮತದಾರರ ನೋಂದಣಿ ಅಧಿಕಾರಿಯ ಮೌಲ್ಯಮಾಪನವನ್ನು ಆಧರಿಸಿ ಹೆಚ್ಚುವರಿ ಮತಗಟ್ಟೆಗಳನ್ನು ಸೃಷ್ಟಿಸಲಾಗಿದೆ. ಮತಗಟ್ಟೆಗಳಲ್ಲಿ ಮತದಾನದ ದಿನ ದೊಡ್ಡ ಸಾಲುಗಳನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೂ 1200 ಮಿತಿಯನ್ನು ಜಾರಿಗೆ ತರಲಾಗುವುದು ಎಂದು ಆಯೋಗ ಹೇಳಿದೆ. ದೇಶಾದ್ಯಂತ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನ ಕೈಗೊಳ್ಳುವುದಾಗಿಯೂ ಆಯೋಗ ಪ್ರಕಟಿಸಿದ್ದು, ಇದರ ವೇಳಾಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಎಂದು ಹೇಳಿದೆ.

2025ರ ಜನವರಿ 1ನೇ ದಿನಾಂಕವನ್ನು ಮಾನದಂಡವಾಗಿ ಇಟ್ಟುಕೊಂಡು ಭಾರತದಲ್ಲಿ ಸುಮಾರು 99 ಕೋಟಿ ಮತದಾರರಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆ ವೇಳೆ 96.8 ಕೋಟಿ ಮತದಾರರಿದ್ದರು. ಪ್ರತಿ ಮತಗಟ್ಟೆಗೆ 1500 ಮತದಾರರ ಗರಿಷ್ಠ ಮಿತಿ ನಿಯಮದ ಅನ್ವಯ 10.5 ಲಕ್ಷ ಮತಗಟ್ಟೆಗಳು ಇದ್ದವು. ಎರಡು ಕೋಟಿ ಹೆಚ್ಚುವರಿ ಮತದಾರರ ಸೇರ್ಪಡೆಯಾಗಿರುವುದರಿಂದ ಹಾಗೂ 1200ರ ಗರಿಷ್ಠ ಮಿತಿ ವಿಧಿಸಿರುವುದರಿಂದ ದೊಡ್ಡಸಂಖ್ಯೆಯಲ್ಲಿ ಮತಗಟ್ಟೆಗಳ ಹೆಚ್ಚಳವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News