ಝುಬೀನ್ ಗರ್ಗ್ ಸಾವಿನ ಕುರಿತು ವಿಧಿವಿಜ್ಞಾನ ವರದಿ ಸ್ಪಷ್ಟ ದಿಕ್ಕು ನೀಡಿದೆ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ
Credit: PTI Photos
ಗುವಾಹಟಿ: ಕಳೆದ ತಿಂಗಳು ಸಿಂಗಾಪುರ ದಲ್ಲಿ ಹಠಾತ್ತನೆ ಮೃತಪಟ್ಟ ಖ್ಯಾತ ಗಾಯಕ ಝುಬೀನ್ ಗರ್ಗ್ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಅವರ ಒಳಾಂಗಗಳ ಕುರಿತ ವಿಧಿ ವಿಜ್ಞಾನ ವರದಿ ಸ್ಪಷ್ಟ ದಿಕ್ಕು ನೀಡಿದೆ ಎಂದು ರವಿವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ. ಆದರೆ, ಅವರು ಝುಬೀನ್ ಗರ್ಗ್ ರ ಒಳಾಂಗಗಳ ಕುರಿತು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿರುವ ವರದಿಯ ವಿವರಗಳನ್ನು ಬಹಿರಂಗಗೊಳಿಸಿಲ್ಲ.
ರವಿವಾರ ಸಂಜೆ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಹಿಮಂತ ಬಿಸ್ವ ಶರ್ಮ, “ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಸ್ವೀಕರಿಸಿದ ನಂತರ, ವಿಶೇಷ ತನಿಖಾ ತಂಡಕ್ಕೆ ಸ್ಪಷ್ಟ ದಿಕ್ಕು ದೊರೆತಿದ್ದು, ಆದಷ್ಟೂ ಶೀಘ್ರವಾಗಿ ನ್ಯಾಯಾಲಯದೆದುರು ಪ್ರಕರಣವನ್ನು ಮಂಡಿಸುವ ವಿಶ್ವಾಸ ಮೂಡಿದೆ. ನಾವೀಗ ಝುಬೀನ್ ಗರ್ಗ್ ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ನ್ಯಾಯ ದೊರಕಿಸಿಕೊಡುವ ಬಗ್ಗೆ ಇನ್ನೂ ಹೆಚ್ಚು ಆತ್ಮವಿಶ್ವಾಸ ಹೊಂದಿದ್ದೇವೆ” ಎಂದು ಹೇಳಿದ್ದಾರೆ.
ಝುಬೀನ್ ಗರ್ಗ್ ರ ಅಂತ್ಯಕ್ರಿಯೆ ನಡೆಯುವುದಕ್ಕೂ ಮುನ್ನ, ಸೆಪ್ಟೆಂಬರ್ 23ರಂದು ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎರಡನೆ ಮರಣೋತ್ತರ ಪರೀಕ್ಷೆ ನಡೆದ ನಂತರ, ಅವರ ಮೃತ ದೇಹದ ಒಳಾಂಗಗಳನ್ನು ಹೊಸ ದಿಲ್ಲಿಯ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು.
ಝುಬೀನ್ ಗರ್ಗ್ ರ ಅಭಿಮಾನಿಗಳ ಒತ್ತಾಯ ಹಾಗೂ ಸಿಂಗಾಪುರ ನಲ್ಲಿ ಝುಬೀನ್ ಗರ್ಗ್ ರ ಮೃತದೇಹವನ್ನು ನೀರಿನಿಂದ ಹೊರತೆಗೆದಾಗ, ಅವರ ಮೃತ ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು ಎಂದು ಅವರ ತಂಡದ ಸಹ ಬ್ಯಾಂಡ್ ವಾದ್ಯಗಾರ್ತಿಯಾದ ಶೇಖರ್ ಜ್ಯೋತಿ ಆರೋಪಿಸಿದ್ದ ಹಿನ್ನೆಲೆಯಲ್ಲಿ, ಎರಡನೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇದು ಝುಬೀನ್ ಗರ್ಗ್ ಅವರಿಗೆ ವಿಷಪ್ರಾಶನ ಮಾಡಿಸಿರಬಹುದು ಎಂಬ ಶಂಕೆಗೆ ಕಾರಣವಾಗಿತ್ತು.