×
Ad

Budget Session| ಮಾಜಿ ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆ ಪ್ರಸ್ತಾಪ: ಸಂಸತ್ತಿನಲ್ಲಿ ಸತತ ಎರಡನೇ ದಿನವೂ ಮುಂದುವರಿದ ಗದ್ದಲ

ರಾಹುಲ್ ಗಾಂಧಿ ಭಾಷಣಕ್ಕೆ ಆಕ್ಷೇಪ

Update: 2026-02-03 15:32 IST

Photo credit: PTI

ಹೊಸದಿಲ್ಲಿ, ಫೆ. 3: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಎಮ್.ಎಮ್. ನರವಾನೆ ಅವರ ಅಪ್ರಕಟಿತ ಆತ್ಮಚರಿತ್ರೆಗೆ ಸಂಬಂಧಿಸಿ ಲೋಕಸಭೆಯಲ್ಲಿ ಮಂಗಳವಾರವೂ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಜಟಾಪಟಿ ನಡೆಯಿತು. ಗದ್ದಲದ ನಡುವೆಯೇ ಎಂಟು ಕಾಂಗ್ರೆಸ್ ಸಂಸದರನ್ನು ಸ್ಪೀಕರ್ ಅಮಾನತುಗೊಳಿಸಿದರು.

ಅಮಾನತುಗೊಂಡ ಸಂಸದರೆಂದರೆ ಹಿಬಿ ಈಡನ್, ಸಿ. ಕಿರಣ್ ಕುಮಾರ್ ರೆಡ್ಡಿ, ಗುರ್ಜೀತ್ ಸಿಂಗ್ ಔಜ್ಲಾ, ಅಮರಿಂದರ್ ಸಿಂಗ್ ರಾಜ ವಾರಿಂಗ್, ಮಣಿಕ್ಕಮ್ ಟಾಗೋರ್, ಪ್ರಶಾಂತ್ ಪಡೋಲೆ ಮತ್ತು ಡೀನ್ ಕುರಿಯಾಕೋಸ್.

ಸ್ಪೀಕರ್ ಪೀಠದತ್ತ ಕಾಗದಗಳನ್ನು ಎಸೆದ ಆರೋಪದಲ್ಲಿ ಅವರ ವಿರುದ್ಧ ಈ ಕ್ರಮ ತೆಗೆದುಕೊಳ್ಳಲಾಗಿದೆ. ಗದ್ದಲದ ಹಿನ್ನೆಲೆಯಲ್ಲಿ ಲೋಕಸಭೆಯನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಮಾಜಿ ಸೇನಾ ಮುಖ್ಯಸ್ಥ ನರವಾನೆಯವರ ಅಪ್ರಕಟಿತ ಪುಸ್ತಕದ ಬಗ್ಗೆ ಮಾತನಾಡಲು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ಸ್ಪೀಕರ್ ಅವಕಾಶ ನಿರಾಕರಿಸಿರುವುದನ್ನು ಪ್ರತಿಪಕ್ಷ ಸಂಸದರು ಪ್ರತಿಭಟಿಸುತ್ತಿದ್ದರು. ಈ ಪುಸ್ತಕದಲ್ಲಿ ನರವಾನೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಬಗ್ಗೆ ರಾಜಕೀಯ ಸೂಕ್ಷ್ಮ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಮಾಜಿ ಸೇನಾ ಮುಖ್ಯಸ್ಥ ನರವಾನೆಯವರ ಅಪ್ರಕಟಿತ ಪುಸ್ತಕದ ವಿವರಗಳನ್ನು ಒಳಗೊಂಡಿದೆ ಎನ್ನಲಾದ ಲೇಖನವನ್ನು ತಾನು ಪ್ರಮಾಣೀಕರಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದಾಗ ಸದನದಲ್ಲಿ ಗದ್ದಲ ಕಾಣಿಸಿಕೊಂಡಿತು.

‘‘ಇದು ನಮ್ಮ ರಾಷ್ಟ್ರಪತಿಯವರ ಭಾಷಣದ ಮುಖ್ಯ ವಿಷಯವಾಗಿದೆ. ಚೀನಾ ಮತ್ತು ಭಾರತ ನಡುವೆ ಏನು ನಡೆಯಿತು ಹಾಗೂ ಅದಕ್ಕೆ ನಮ್ಮ ಪ್ರಧಾನಿ ಹೇಗೆ ಪ್ರತಿಕ್ರಿಯಿಸಿದರು ಎಂಬ ಬಗ್ಗೆ ಹೇಳಿಕೆಯೊಂದನ್ನು ನೀಡಲು ನನಗೆ ಅವಕಾಶ ಕೊಡಿ ಎಂದಷ್ಟೇ ನಾನು ಹೇಳುತ್ತಿರುವುದು. ನನ್ನನ್ನು ಯಾಕೆ ತಡೆಯುತ್ತೀರಿ?’’ ಎಂದು ರಾಹುಲ್ ಪ್ರಶ್ನಿಸಿದರು.

ನಿಮ್ಮ ದಾಖಲೆಯನ್ನು ಮಂಡಿಸಿ ಎಂದು ಸ್ಪೀಕರ್ ಪೀಠದಲ್ಲಿದ್ದ ಕೃಷ್ಣಪ್ರಸಾದ್ ತೆನ್ನೆಟಿ ರಾಹುಲ್ ಗಾಂಧಿಗೆ ಸೂಚಿಸಿದರು. ‘‘ನಾವು ಅದನ್ನು ಪರಿಶೀಲಿಸುತ್ತೇವೆ ಮತ್ತು ನಮ್ಮ ತೀರ್ಮಾನವನ್ನು ನಿಮಗೆ ತಿಳಿಸುತ್ತೇವೆ’’ ಎಂದು ಸ್ಪೀಕರ್ ಹೇಳಿದರು.

ರಾಹುಲ್ ಗಾಂಧಿಯ ಮಾತುಗಳಿಗೆ ಬಿಜೆಪಿ ಸಂಸದರು ಬಲವಾದ ಆಕ್ಷೇಪ ವ್ಯಕ್ತಪಡಿಸಿದರು ಹಾಗೂ ಕಾಂಗ್ರೆಸ್ ಸಂಸದರು ಅದನ್ನು ಪ್ರತಿಭಟಿಸಿದರು. ಈ ಹಂತದಲ್ಲಿ ಕಾಂಗೆರಸ್ ಸಂಸದರು ಕಾಗದಗಳನ್ನು ಹರಿದು ಸ್ಪೀಕರ್ ಕುರ್ಚಿಯತ್ತ ಎಸೆದರು.

‘ದ ಕಾರವನ್’ನಲ್ಲಿ ಪ್ರಕಟಗೊಂಡ ಲೇಖನದ ಬಗ್ಗೆ ಮಾತನಾಡುವುದನ್ನು ಮುಂದುವರಿಸಿದ ರಾಹುಲ್, ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯವಾಗಿದೆ ಎಂದರು.

ಮಾತಾಡದಂತೆ ನನ್ನನ್ನು ಯಾಕೆ ನಿರ್ಬಂಧಿಸಲಾಗುತ್ತಿದೆ?

ತನ್ನ ಭಾಷಣದ ಆರಂಭದಲ್ಲಿ, ಮಾಜಿ ಸೇನಾ ಮುಖ್ಯಸ್ಥರ ಆತ್ಮಚರಿತ್ರೆಯ ಕುರಿತ ಲೇಖನವನ್ನು ಉಲ್ಲೇಖಿಸಲು ತನಗೆ ಅನುಮತಿ ನಿರಾಕರಿಸಿರುವುದನ್ನು ಆಕ್ಷೇಪಿಸಿದ ರಾಹುಲ್, ತನ್ನನ್ನು ಯಾಕೆ ನಿರ್ಬಂಧಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.

‘‘ರಾಷ್ಟ್ರಪತಿಯವರ ಭಾಷಣದ ಅತ್ಯಂತ ಮುಖ್ಯ ವಿಷಯ ರಾಷ್ಟ್ರೀಯ ಭದ್ರತೆ. ಪಾಕಿಸ್ತಾನೀಯರು, ಚಿನೀಯರು ಹಾಗೂ ನಮ್ಮ ನಡುವಿನ ಸಂಬಂಧ. ಈ ಲೇಖನದಲ್ಲಿ ಅತ್ಯಂತ ಮುಖ್ಯವಾದ ವಿಷಯವಿದೆ. ಈ ಲೇಖನವನ್ನು ನಾನು ಪ್ರಮಾಣೀಕರಿಸಿದ್ದೇನೆ. ಪ್ರಧಾನಿಯ ಪ್ರತಿಕ್ರಿಯೆಯನ್ನು ಆ ಲೇಖನ ವಿವರಿಸುತ್ತದೆ’’ ಎಂದರು.

ಪೂರ್ವ ಲಡಾಖ್‌ನ ಬಗ್ಗೆ ಉಲ್ಲೇಖಿಸಿದ ರಾಹುಲ್, ‘‘ಅಲ್ಲೊಂದು ಸಂಘರ್ಷ ನಡೆಯಿತು. ನಮ್ಮ ಸೈನಿಕರು ಮೃತರಾದರು’’ ಎಂದರು.

ಆಗ ಬಿಜೆಪಿ ಸದಸ್ಯರು ಪ್ರತಿಭಟಿಸಿದರು ಮತ್ತು ಸದನದಲ್ಲಿ ದೊಡ್ಡ ಗದ್ದಲ ಸೃಷ್ಟಿಯಾಯಿತು.

ಬಾಯಿ ಮುಚ್ಚಿಸಲು ಉದ್ದೇಶಪೂರ್ವಕ ಪ್ರಯತ್ನ

ನಾನು ಮಾತನಾಡದಂತೆ ಸರಕಾರವು ಉದ್ದೇಶಪೂರ್ವಕವಾಗಿ ತಡೆಯುತ್ತಿದೆ ಎಂದು ಲೋಕಸಭೆ ಮುಂದೂಡಲ್ಪಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಹೇಳಿದರು.

‘‘ಇತಿಹಾಸದಲ್ಲೇ ಮೊದಲ ಬಾರಿಗೆ, ರಾಷ್ಟ್ರಪತಿಯ ಭಾಷಣದ ಬಗ್ಗೆ ಪ್ರತಿಪಕ್ಷ ನಾಯಕನಿಗೆ ಮಾತನಾಡಲು ಅವಕಾಶ ನೀಡಲಾಗಿಲ್ಲ’’ ಎಂದು ಅವರು ಹೇಳಿದರು.

‘‘ಮಾತನಾಡಲು ನನಗೆ ಸರಕಾರ ಅವಕಾಶ ನೀಡುತ್ತಿಲ್ಲ. ಮೋದಿಜೀ ಗಲಿಬಿಲಿಗೊಂಡಿದ್ದಾರೆ’’ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News