5 ವರ್ಷಗಳಲ್ಲಿ 99,000 ಹೆಕ್ಟೇರ್ ಅರಣ್ಯ ಭೂಮಿ ಬೇರೆ ಉದ್ದೇಶಗಳಿಗೆ ಬಳಸಲಾಗಿದೆ: ರಾಜ್ಯಸಭೆಗೆ ಕೇಂದ್ರ ಸಚಿವ ಕೀರ್ತಿವರ್ಧನ್ ಸಿಂಗ್ ಮಾಹಿತಿ
ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ: 2020ರ ಬಳಿಕ, ಭಾರತದಲ್ಲಿ 99,000 ಹೆಕ್ಟೇರ್‌ಗೂ ಅಧಿಕ ಅರಣ್ಯಭೂಮಿಯನ್ನು ಅರಣ್ಯೇತರ ಚಟುವಟಿಕೆಗಳಿಗಾಗಿ ಬಳಸಲಾಗಿದೆ ಎಂದು ಕೇಂದ್ರ ಪರಿಸರ ಖಾತೆಯ ಸಹಾಯಕ ಸಚಿವ ಕೀರ್ತಿವರ್ಧನ್ ಸಿಂಗ್ ಗುರುವಾರ ರಾಜ್ಯಸಭೆಗೆ ತಿಳಿಸಿದರು. ಈ ಪೈಕಿ ಹೆಚ್ಚಿನ ಭೂಮಿ ರಸ್ತೆಗಳು, ಗಣಿಗಾರಿಕೆ, ಜಲವಿದ್ಯುತ್ ಮತ್ತು ನೀರಾವರಿ ಯೋಜನೆಗಳಿಗೆ ಹೋಗಿದೆ ಎಂದರು.
2020-21 ಮತ್ತು 2024-25ರ ನಡುವಿನ ಅವಧಿಯಲ್ಲಿ 22,233 ಹೆಕ್ಟೇರ್ ಅರಣ್ಯಭೂಮಿಯನ್ನು ರಸ್ತೆ ಯೋಜನೆಗಳಿಗಾಗಿ ಉಪಯೋಗಿಸಲಾಗಿದೆ ಎಂದು ಅವರು ತಿಳಿಸಿದರು. ಈ ಅವಧಿಯಲ್ಲಿ, 18,914 ಹೆಕ್ಟೇರ್ ಕಾಡು ಪ್ರದೇಶವನ್ನು ಗಣಿಗಾರಿಕೆ ಮತ್ತು ಕೋರೆಗಳಿಗೆ ಹಾಗೂ 17,434 ಹೆಕ್ಟೇರ್ ಕಾಡನ್ನು ಜಲವಿದ್ಯುತ್ ಮತ್ತು ನೀರಾವರಿ ಯೋಜನೆಗಳಿಗೆ ಒದಗಿಸಲಾಗಿದೆ ಎಂದು ರಾಜ್ಯಸಭೆಗೆ ನೀಡಿರುವ ಮಾಹಿತಿ ತಿಳಿಸಿದೆ.
ಅರಣ್ಯ ಗ್ರಾಮ ಪರಿವರ್ತನೆ, ಕುಡಿಯುವ ನೀರಿನ ಯೋಜನೆಗಳು, ಪುನರ್ವಸತಿ ಕಾಮಗಾರಿಗಳು, ಕಾಲುವೆಗಳು, ರಕ್ಷಣಾ ಯೋಜನೆಗಳು, ಆಪ್ಟಿಕಲ್ ಫೈಬರ್ ಕೇಬಲ್‌ಗಳ ಅಳವಡಿಕೆ, ಕೈಗಾರಿಕೆಗಳು ಮತ್ತು ಹೊಸ ಪೆಟ್ರೋಲ್ ಪಂಪ್‌ಗಳಿಗಾಗಿಯೂ ಗಣನೀಯ ಪ್ರಮಾಣದಲ್ಲಿ ಅರಣ್ಯ ಭೂಮಿಯನ್ನು ಬಳಸಲಾಗಿದೆ.