×
Ad

ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಂ.ಎಸ್.ಗಿಲ್ ನಿಧನ

Update: 2023-10-16 08:03 IST

Photo: twitter.com/INCIndia

ಹೊಸದಿಲ್ಲಿ: ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಮನೋಹರ ಸಿಂಗ್ ಗಿಲ್ ದಕ್ಷಿಣ ದೆಹಲಿ ಆಸ್ಪತ್ರೆಯಲ್ಲಿ  ಭಾನುವಾರ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಮಾಜಿ ಉನ್ನತ ಅಧಿಕಾರಿ ಗಿಲ್ ಅವರು ಶಿರೋಮಣಿ ಅಕಾಲಿದಳದ ಮುಖಂಡ ಪ್ರಕಾಶ್ ಸಿಂಗ್ ಬಾದಲ್ ಅವರು ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯುವ ಅಧಿಕಾರಿಯಾಗಿ ಗಮನ ಸೆಳೆದಿದ್ದರು. 1996 ಡಿಸೆಂಬರ್ನಿಂದ 2001 ಜೂನ್ ವರೆಗೆ ಅವರು ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

ಟಿ.ಎನ್.ಶೇಷನ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಅವಧಿಯಲ್ಲಿ ಗಿಲ್ ಹಾಗೂ ಜಿ.ವಿ.ಜಿ.ಕೃಷ್ಣಮೂರ್ತಿಯವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಹಂತದಲ್ಲಿ ಚುನಾವಣಾ ಆಯೋಗವನ್ನು ಬಹು ಸದಸ್ಯ ಸಂಸ್ಥೆಯಾಗಿ ಪರಿವರ್ತಿಸಲಾಗಿತ್ತು.

ಬಳಿಕ ರಾಜಕೀಯ ಕ್ಷೇತ್ರಕ್ಕೆ ಇವರು ಧುಮುಕಿದಾಗ ರಾಜಕೀಯ ಕ್ಷೇತ್ರ ಪ್ರವೇಶಿಸಿದ ಮೊದಲ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎನಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ಅವರನ್ನು 2008ರಲ್ಲಿ ಕೇಂದ್ರ ಸಚಿವರಾಗಿ ನೇಮಕ ಮಾಡಲಾಗಿತ್ತು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗಿಲ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಯುಪಿಎ ಸರ್ಕಾರದ ಸಹೋದ್ಯೋಗಿಯಾಗಿದ್ದ ಮತ್ತು ಅದಕ್ಕೂ ಮುನ್ನ ನಾಗರಿಕ ಸೇವಾ ಅಧಿಕಾರಿಯಾಗಿ ದೇಶದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದರು. ಕ್ರೀಡೆ, ಚುನಾವಣಾ ಪ್ರಕ್ರಿಯೆ ಹಾಗೂ ಕೃಷಿ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಸುಧೀರ್ಘ ಕಾಲ ನೆನಪಿನಲ್ಲಿ ಉಳಿಯುವಂಥದ್ದು ಎಂದು ಬಣ್ಣಿಸಿದ್ದಾರೆ.

ಗಿಲ್ ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಸಂಸ್ಕಾರ ಸೋಮವಾರ ನಡೆಯಲಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News