ಮೌಲ್ಯವರ್ಧನೆಗೆ ಉತ್ತೇಜನ ನೀಡಲು ಸರಕಾರ ಹಲಸು ಮಂಡಳಿಯನ್ನು ಸ್ಥಾಪಿಸಬೇಕು: ದೇವೇಗೌಡ ಆಗ್ರಹ
Photo Credit: PTI
ಹೊಸದಿಲ್ಲಿ: ದಕ್ಷಿಣ ಭಾರತದಲ್ಲಿ ಮೌಲ್ಯವರ್ಧನೆಯನ್ನು ಉತ್ತೇಜಿಸಲು ಮಖಾನಾ ಮಂಡಳಿಯನ್ನು ಸ್ಥಾಪಿಸಿರುವಂತೆ ಸರಕಾರವು ಹಲಸು ಮಂಡಳಿಯನ್ನೂ ಸ್ಥಾಪಿಸಬೇಕು ಎಂದು ಗುರುವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಗ್ರಹಿಸಿದರು.
ಜ್ವರದ ಹೊರತಾಗಿಯೂ ರಾಜ್ಯಸಭೆಯಲ್ಲಿ ನಡೆದ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ರಾಜ್ಯಸಭೆಗೆ ಗೈರಾಗುವುದು ಬೇಕಿರಲಿಲ್ಲ ಹಾಗೂ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಬೇಕಿತ್ತು ಎಂದು ಹೇಳಿದರು.
ಕೇಂದ್ರ ಬಜೆಟ್ ಅನ್ನು ಪ್ರಶಂಸಿಸಿದ ದೇವೇಗೌಡ, ಸಮಾಜದ ಎಲ್ಲ ವರ್ಗಗಳಿಗೆ ನೆರವು ನೀಡಲು ಹಾಗೂ ಜನರ ಹಿತಾಸಕ್ತಿಯನ್ನು ರಕ್ಷಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಕೈಲಾದದದ್ದನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಯ ಕುರಿತು ಪ್ರಸ್ತಾಪಿಸಿದ ಅವರು, ದಕ್ಷಿಣ ಭಾರತದಲ್ಲಿ ಹಲಸಿನ ಉತ್ಪಾದನೆ, ರಫ್ತು ಹಾಗೂ ಮೌಲ್ಯವರ್ಧನೆಯನ್ನು ಉತ್ತೇಜಿಸಲು ಮಂಡಳಿಯೊಂದನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ದಕ್ಷಿಣ ಭಾರತದಲ್ಲಿ ಹಲಸನ್ನು ರಸ್ತೆ ಬದಿ ಮಾರಾಟ ಮಾಡಲಾಗುತ್ತದೆ. ಹಲಸಿಗಾಗಿ ಪ್ರತ್ಯೇಕ ಮಂಡಳಿಯನ್ನು ಸ್ಥಾಪಿಸಿದರೆ ಯುವಕರು ಮೌಲ್ಯವರ್ಧನೆಯೊಳಗೆ ಬರಲು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.