×
Ad

ಜಿ ಎಸ್‌ ಟಿ 2.0 ಬಗ್ಗೆ ವ್ಯಾಪಕ ಸಮಾಲೋಚನೆ ನಡೆಸಿ; ಕೇಂದ್ರ ಸರಕಾರಕ್ಕೆ ಕಾಂಗ್ರೆಸ್ ಒತ್ತಾಯ

Update: 2025-08-16 20:21 IST

 ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಆ. 16: ಪ್ರಧಾನಿ ನರೇಂದ್ರ ಮೋದಿ ತನ್ನ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸಿರುವ ಸರಕು ಮತ್ತು ಸೇವೆಗಳ ತೆರಿಗೆ (ಜಿ ಎಸ್‌ ಟಿ) 2.0 ಬಗ್ಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಬೇಕು ಎಂದು ಕಾಂಗ್ರೆಸ್ ಶನಿವಾರ ಒತ್ತಾಯಿಸಿದೆ. ತೆರಿಗೆಗಳ್ಳತನಕ್ಕೆ ಅವಕಾಶ ಕಲ್ಪಿಸುವ ಪ್ರಸಕ್ತ ಜಿ ಎಸ್‌ ಟಿ ವ್ಯವಸ್ಥೆಯನ್ನು ಅದು ಟೀಕಿಸಿದೆ ಹಾಗೂ ತೆರಿಗೆ ಹಂತಗಳ ಸಂಖ್ಯೆಯಲ್ಲಿ ಗಣನೀಯ ಕಡಿತ ಮಾಡಬೇಕು ಎಂಬ ಸಲಹೆಯನ್ನು ಅದು ನೀಡಿದೆ.

‘‘ಈ ಬದಲಾವಣೆ ಆಗದಿದ್ದರೆ ಹಾಗೂ ಖಾಸಗಿ ಬಳಕೆ ಮತ್ತು ಖಾಸಗಿ ಹೂಡಿಕೆ ಹೆಚ್ಚದಿದ್ದರೆ ಆರ್ಥಿಕ ಬೆಳವಣಿಗೆ ತನ್ನಷ್ಟಕ್ಕೆ ತಾನು ಹೆಚ್ಚುವುದಿಲ್ಲ ಎಂದು ವಾಸ್ತವವನ್ನು ಪ್ರಧಾನಿ ಕೊನೆಗೂ ಅರ್ಥಮಾಡಿಕೊಂಡಿರುವಂತೆ ಕಾಣುತ್ತಿದೆ’’ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅಧಿಕೃತ ಹೇಳಿಕೆಯೊಂದರಲ್ಲಿ ಹೇಳಿದ್ದಾರೆ. ರಾಜ್ಯಗಳಿಗೆ ಕಂದಾಯ ಅನಿಶ್ಚಿತತೆಯನ್ನು ಕಡಿಮೆಗೊಳಿಸುವ ಸರಳೀಕೃತ ತೆರಿಗೆ ವ್ಯವಸ್ಥೆಯೊಂದು ಇಂದಿನ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಜಿ ಎಸ್‌ ಟಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆಗಳನ್ನು ತರುವ ಯೋಜನೆಯನ್ನು ಪ್ರಧಾನಿ ಮೋದಿ ಘೋಷಿಸಿದ ಒಂದು ದಿನದ ಬಳಿಕ ಕಾಂಗ್ರೆಸ್ ಈ ಪ್ರತಿಕ್ರಿಯೆ ನೀಡಿದೆ. ದೀಪಾವಳಿ ವೇಳೆಗೆ ಹೆಚ್ಚಿನ ವಸ್ತುಗಳ ತೆರಿಗೆಯನ್ನು ಕಡಿತಗೊಳಿಸುವ ಇಂಗಿತವನ್ನು ಮೋದಿ ವ್ಯಕ್ತಪಡಿಸಿದ್ದಾರೆ.

‘‘ಜಿ ಎಸ್‌ ಟಿ ಎಂಬ ಅತ್ಯಂತ ಮಹತ್ವದ ಹಾಗೂ ಜ್ವಲಂತ ರಾಷ್ಟ್ರೀಯ ವಿಷಯದ ಬಗ್ಗೆ ವ್ಯಾಪಕ ಹಾಗೂ ಮಾಹಿತಿಯುಕ್ತ ಚರ್ಚೆ ನಡೆಯಲು ಸಾಧ್ಯವಾಗುವಂತೆ ಜಿ ಎಸ್‌ ಟಿ 2.0 ಕುರಿತ ಅಧಿಕೃತ ಚರ್ಚಾ ಪತ್ರವೊಂದನ್ನು ಶೀಘ್ರವಾಗಿ ಹೊರತರುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸರಕಾರವನ್ನು ಒತ್ತಾಯಿಸುತ್ತದೆ. ಜಿ ಎಸ್‌ ಟಿ 2.0 ಅಕ್ಷರ, ಆಶಯ ಮತ್ತು ಅನುಷ್ಠಾನದಲ್ಲಿ ನಿಜವಾಗಿಯೂ ಉತ್ತಮ ಹಾಗೂ ಸರಳ ತೆರಿಗೆ ವ್ಯವಸ್ಥೆಯಾಗಬೇಕೇ ಹೋರತು, ಈಗಿನಂತೆ ಬೆಳವಣಿಗೆಯನ್ನು ಹತ್ತಿಕ್ಕುವ ತೆರಿಗೆ (ಗ್ರೋತ್ ಸಪ್ರೆಸಿಂಗ್ ಟ್ಯಾಕ್ಸ್- ಜಿ ಎಸ್‌ ಟಿ)ಯಾಗಬಾರದು’’ ಎಂದು ರಮೇಶ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News