×
Ad

ಯಾವ ಕಾನೂನಿನಡಿ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರು ವಿಡಿಯೊ ಚಿತ್ರೀಕರಣ ಮಾಡದಂತೆ ನಿಷೇಧಿಸಲಾಗಿದೆ?: ಗುಜರಾತ್ ಹೈಕೋರ್ಟ್ ನಿಂದ ಪೊಲೀಸರಿಗೆ ತರಾಟೆ

Update: 2025-04-18 18:45 IST

ಗುಜರಾತ್ ಹೈಕೋರ್ಟ್ | PTI  

ಅಹಮದಾಬಾದ್: ಯಾವ ಕಾನೂನಿನಡಿ ಪೊಲೀಸ್ ಠಾಣೆಗಳಲ್ಲಿ ಜನರು ವಿಡಿಯೊ ಚಿತ್ರೀಕರಣ ಮಾಡದಂತೆ ನಿಷೇಧಿಸಲಾಗಿದೆ ಎಂದು ಗುಜರಾತ್ ಹೈಕೋರ್ಟ್ ನ ನ್ಯಾ. ನಿರ್ಝಾರ್ ಎಸ್. ದೇಸಾಯಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆ ಮೂಲಕ, ನಾಗರಿಕರ ಹಕ್ಕು ಹಾಗೂ ಪೊಲೀಸರ ಉತ್ತರದಾಯಿತ್ವ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ನ್ಯಾಯಾಲಯದ ವಿಚಾರಣೆಯ ವೇಳೆ ನಡೆದ ವಿಷಯಾಧಾರಿತ ವಾದ-ಪ್ರತಿವಾದದ ಸಂದರ್ಭದಲ್ಲಿ, “ಯಾವ ಸೆಕ್ಷನ್ ಅಡಿ ವಿಡಿಯೊ ಚಿತ್ರೀಕರಣವನ್ನು ನಿಷೇಧಿಸಲಾಗಿದೆ ಎಂದು ನನಗೆ ತಿಳಿಸಿ. ನಾವೀಗ ಪಾರದರ್ಶಕತೆಯ ಯುಗದಲ್ಲಿ ಜೀವಿಸುತ್ತಿದ್ದೇವೆ. ಒಂದು ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಕಾನೂನು ಬಾಹಿರ ಕೃತ್ಯವೆಸಗುತ್ತಿದ್ದಾರೆ ಹಾಗೂ ನಾಗರಿಕರೊಬ್ಬರು ಅದನ್ನು ವಿಡಿಯೊ ಚಿತ್ರೀಕರಣ ಮಾಡಲು ಬಯಸುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಆಗ ಯಾವ ಕಾನೂನಿನ ನಿಯಮವು ನಿಮಗೆ ವಿಡಿಯೊ ಚಿತ್ರೀಕರಣವನ್ನು ತಡೆಯುವ ಅಧಿಕಾರ ನೀಡುತ್ತದೆ? ಕಾನೂನಿನ ಯಾವ ನಿಯಮದಡಿ ನೀವು ಆರೋಪಿಯನ್ನು ವಿಡಿಯೊ ಚಿತ್ರೀಕರಣ ಮಾಡುವುದರಿಂದ ತಡೆದಿರಿ?” ಎಂದು ನ್ಯಾ. ನಿರ್ಝಾರ್ ಎಸ್. ದೇಸಾಯಿ ಅವರು ಸರಕಾರಿ ಅಭಿಯೋಜಕರನ್ನು ತರಾಟೆಗೆ ತೆಗೆದುಕೊಂಡರು.

ಈ ವಿಡಿಯೊ ವ್ಯಾಪಕವಾಗಿ ಸಾರ್ವಜನಿಕರ ಗಮನ ಸೆಳೆದಿದ್ದು, ಪೊಲೀಸ್ ಠಾಣೆಗಳ ಆವರಣಗಳಲ್ಲಿ ಚಿತ್ರೀಕರಣ ಮಾಡುವುದಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಕಾನೂನು ವ್ಯಾಖ್ಯಾನಗಳ ಹಿನ್ನೆಲೆಯಲ್ಲಿ ಈ ಘಟನೆ ವಿಶೇಷ ಮಹತ್ವ ಪಡೆದುಕೊಂಡಿದೆ.

ಇದಕ್ಕೂ ಮುನ್ನ, ರವೀಂದ್ರ ಉಪಾಧ್ಯಾಯ್ ವರ್ಸಸ್ ಮಹಾರಾಷ್ಟ್ರ ಸರಕಾರ (2022 ಎಸ್ಸಿಸಿ ಆನ್ಲೈನ್ ಬಾಂಬೆ 2015) ಪ್ರಕರಣದಲ್ಲಿ, ಪೊಲೀಸ್ ಠಾಣೆಗಳಲ್ಲಿ ವಿಡಿಯೊ ಚಿತ್ರೀಕರಣ ಮಾಡುವುದು ಗೂಢಚಾರಿಕೆಗೆ ಸಂಬಂಧಿಸಿದ ಅಧಿಕೃತ ಗೋಪ್ಯತಾ ಕಾಯ್ದೆ, 1923ರ ಸೆಕ್ಷನ್ 3ರ ಅಡಿ ಬರುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ನ ಔರಂಗಾಬಾದ್ ನ್ಯಾಯಪೀಠ ತೀರ್ಪು ನೀಡಿತ್ತು. ಅಧಿಕೃತ ಗೋಪ್ಯತಾ ಕಾಯ್ದೆ, 1923ರ ಸೆಕ್ಷನ್ 2(8) ಅಡಿ ಪೊಲೀಸ್ ಠಾಣೆಗಳನ್ನು ನಿರ್ಬಂಧಿತ ಸ್ಥಳಗಳೆಂದು ವರ್ಗೀಕರಿಸಲಾಗಿಲ್ಲ ಎಂದೂ ನ್ಯಾಯಾಲಯ ಹೇಳಿತ್ತು.

ಹೀಗಾಗಿ, ಪೊಲೀಸ್ ಠಾಣೆಗಳಲ್ಲಿ ಗೋಪ್ಯವಾಗಿ ವಿಡಿಯೊ ಚಿತ್ರೀಕರಣ ಮಾಡುವುದನ್ನು ಅಧಿಕೃತ ಗೋಪ್ಯತಾ ಕಾಯ್ದೆಯಡಿ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News