ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆಗೆ ತಡೆಯಾಜ್ಞೆ ನೀಡಲು ಗುಜರಾತ್ ಹೈಕೋರ್ಟ್ ನಕಾರ
ಅರವಿಂದ ಕೇಜ್ರಿವಾಲ್ | Photo: PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆಯ ಬಗ್ಗೆ ತಾನು ನೀಡಿದ್ದ ಹೇಳಿಕೆಗಳಿಗಾಗಿ ಗುಜರಾತ್ ವಿವಿಯು ತನ್ನ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ತಡೆಯಾಜ್ಞೆ ಕೋರಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮನವಿಯನ್ನು ಪುರಸ್ಕರಿಸಲು ಗುಜರಾತ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಆರ್‌ಟಿಐ ಕಾಯ್ದೆಯಡಿ ಮೋದಿಯವರ ಶೈಕ್ಷಣಿಕ ಪದವಿಗಳ ಕುರಿತು ಮಾಹಿತಿಯನ್ನು ಒದಗಿಸುವಂತೆ ಮುಖ್ಯ ಮಾಹಿತಿ ಆಯುಕ್ತರ ಆದೇಶವನ್ನು ಗುಜರಾತ್ ಹೈಕೋರ್ಟ್ ಬದಿಗಿರಿಸಿತ್ತು. ಆನಂತರ ಪ್ರಧಾನಿಯ ಶೈಕ್ಷಣಿಕ ಅರ್ಹತೆ ಬಗ್ಗೆ ಕೇಜ್ರಿವಾಲ್ ಹಾಗೂ ಆಪ್ ನಾಯಕ ಸಂಜಯ್ ಸಿಂಗ್ ವಿರುದ್ಧ ಗುಜರಾತ್ ವಿವಿಯ ರಿಜಿಸ್ಟ್ರಾರ್ ಪಿಯೂಶ್ ಪಟೇಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಇಂದು ಪ್ರಕರಣದ ಆಲಿಕೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಎಸ್.ವಿ.ಎನ್. ಭಟ್ಟಿ ಅವರನ್ನೊಳಗೊಂಡ ಗುಜರಾತ್ ಹೈಕೋರ್ಟ್‌ನ ನ್ಯಾಯಪೀಠವು ಪ್ರಕರಣದ ಮುಂದಿನ ಆಲಿಕೆಯನ್ನು ಆಗಸ್ಟ್ 29ರಂದು ನಡೆಸಲಿದೆ.
ಕೇಜ್ರಿವಾಲ್ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಸಿಂಘ್ವಿ ವಾದಿಸಿದ್ದರು. ಗುಜರಾತ್ ವಿವಿ ಪರವಾಗಿ ನ್ಯಾಯಲಯದಲ್ಲಿ ವಾದ ಮಂಡಿಸಿದ ಸಾಲಿಸಿಚರ್ ಜನರಲ್ ತುಷಾರ್ ಮೆಹ್ತಾ ಅವರು, ವಾಸ್ತವಗಳನ್ನು ಹತ್ತಿಕ್ಕಿದ್ದಾರೆಂದು ಆರೋಪಿಸಿದರು.