×
Ad

ಅಡುಗೆ ಮನೆಗೂ ತಟ್ಟಿದ ಗಲ್ಫ್ ಯುದ್ಧದ ಬಿಸಿ; ಇಂದಿನಿಂದಲೇ LPG ದುಬಾರಿ

Update: 2026-03-07 07:20 IST

ಸಾಂದರ್ಭಿಕ ಚಿತ್ರ PC: PTI

ಹೊಸದಿಲ್ಲಿ: ಇರಾನ್-ಅಮೆರಿಕ-ಇಸ್ರೇಲ್ ಯುದ್ಧದ ಬಿಸಿ ಭಾರತದಲ್ಲೂ ಪ್ರತಿ ಅಡುಗೆ ಮನೆಯನ್ನು ತಟ್ಟಿದ್ದು, ದೇಶಾದ್ಯಂತ ಶನಿವಾರದಿಂದಲೇ ಗೃಹಬಳಕೆಯ 14.2 ಕೆ.ಜಿ ತೂಕದ LPG ಸಿಲಿಂಡರ್ ಬೆಲೆ 60 ರೂಪಾಯಿಗಳಷ್ಟು ಹೆಚ್ಚಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.

ದರ ಪರಿಷ್ಕರಣೆಯಿಂದ LPG ಸಿಲಿಂಡರ್ ಬೆಲೆ ದೆಹಲಿಯಲ್ಲಿ 853 ರೂಪಾಯಿಯಿಂದ 913 ರೂಪಾಯಿಗೆ ಏರಿದೆ. ಮುಂಬೈನಲ್ಲಿ LPG ಸಿಲಿಂಡರ್ ದರ 852.50 ರೂಪಾಯಿಯಿಂದ 912.5 ರೂಪಾಯಿಗೆ ಹೆಚ್ಚಿದೆ. ಕೊಲ್ಕತ್ತಾದಲ್ಲಿ 879 ರೂಪಾಯಿಯಿಂದ 930ಕ್ಕೆ ಹಾಗೂ ಚೆನ್ನೈನಲ್ಲಿ 868.50 ರೂಪಾಯಿಯಿಂದ 928.50 ರೂಪಾಯಿಗೆ ಏರಿಕೆಯಾಗಿದೆ.

ಈ ಬೆಲೆ ಏರಿಕೆ ವ್ಯವಹಾರಗಳ ಮೇಲೂ ಪರಿಣಾಮ ಬೀರಲಿದ್ದು, ವಾಣಿಜ್ಯ ಬಳಕೆಯ LPG ಸಿಲಿಂಡರ್ ದರ 115 ರೂಪಾಯಿ ಹೆಚ್ಚಳವಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ದರ ದೆಹಲಿಯಲ್ಲಿ 1883 ರೂಪಾಯಿ, ಮುಂಬೈನಲ್ಲಿ 1835, ಕೊಲ್ಕತ್ತಾದಲ್ಲಿ 1990 ಹಾಗೂ ಚೆನ್ನೈನಲ್ಲಿ 2043.5 ರೂಪಾಯಿಗೆ ಹೆಚ್ಚಿದೆ. 2025ರ ಏಪ್ರಿಲ್ ಬಳಿಕ ಇದೇ ಮೊದಲ ಬಾರಿಗೆ LPG ದರ ಏರಿಕೆಯಾಗಿದೆ. ಈ ದರ ಏರಿಕೆಯಿಂದ ಗೃಹಬಳಕೆ ಗ್ರಾಹಕರು, ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ.

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆಯೂ ಅನಿಲ ಪೂರೈಕೆ ವ್ಯವಸ್ಥೆ ಆರಾಮದಾಯಕವಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. "ಕೈಗೆಟುಕುವ ಮತ್ತು ಸುಸ್ಥಿರ ಇಂಧನವನ್ನು ನಮ್ಮ ಪ್ರಜೆಗಳಿಗೆ ಲಭ್ಯವಾಗುವಂತೆ ಮಾಡುವುದು ನಮ್ಮ ಆದ್ಯತೆ. ನಾವು ಆರಾಮದಾಯಕವಾಗಿ ಅದನ್ನು ಮಾಡುತ್ತಿದ್ದೇವೆ. ಭಾರತದಲ್ಲಿ ಇಂಧನ ಕೊರತೆ ಇಲ್ಲ. ಆದ್ದರಿಂದ ನಮ್ಮ ಇಂಧನ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ" ಎಂದು ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಎಕ್ಸ್ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News