Haryana | 23 ವರ್ಷದ ಮಹಿಳಾ ಶೂಟರ್ ಮೇಲೆ ಅತ್ಯಾಚಾರ ಎಸಗಿದ ಆರೋಪ; ಮೂವರ ಬಂಧನ
ಸಾಂದರ್ಭಿಕ ಚಿತ್ರ | Photo Credit : freepik
ಫರೀದಾಬಾದ್(ಹರ್ಯಾಣ), ಡಿ. 19: 23 ವರ್ಷದ ಮಹಿಳಾ ಶೋಟರ್ ಓರ್ವರನ್ನು ಇಲ್ಲಿನ ಹೊಟೇಲೊಂದರಲ್ಲಿ ಅತ್ಯಾಚಾರ ಎಸಗಿದ ಆರೋಪದಲ್ಲಿ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರದಲ್ಲಿ ಸರಾಯಿ ಖ್ವಾಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಾದ ಸತೇಂದ್ರ, ಗೌರವ್ ಹಾಗೂ ಮಹಿಳಾ ಶೂಟರ್ ಳ ಗೆಳತಿಯನ್ನು ಹೊಟೇಲ್ ನ ಆವರಣದಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಮಹಿಳೆ ತನ್ನ ಗೆಳತಿಯೊಂದಿಗೆ ಮಂಗಳವಾರ ಫರೀದಾಬಾದ್ ಗೆ ಆಗಮಿಸಿದ್ದರು. ಬುಧವಾರ ಸಂಜೆ ಸ್ಪರ್ಧೆ ಮುಗಿದ ಬಳಿಕ ಶೂಟರ್ ನ ಗೆಳತಿ ಫರೀದಾಬಾದ್ ನ ನಿವಾಸಿ ಗೌರವ್ ನನ್ನು ಸಂಪರ್ಕಿಸಿ ಮೆಟ್ರೊ ನಿಲ್ದಾಣದಲ್ಲಿ ಬಿಡಲು ಕೇಳಿಕೊಂಡಳು. ಗೌರವ್ ತನ್ನ ಗೆಳೆಯ ಸತೇಂದ್ರನೊಂದಿಗೆ ಫರೀದಾಬಾದ್ ಗೆ ಆಗಮಿಸಿದ. ಅನಂತರ ನಾಲ್ವರು ಫರೀದಾಬಾದ್‌ನಲ್ಲಿ ರಾತ್ರಿ ತಂಗಲು ಹಾಗೂ ಮರುದಿನ ತೆರಳಲು ನಿರ್ಧರಿಸಿದರು. ಬಳಿಕ ಅವರು ಒಂದು ಹೊಟೇಲ್ ನಲ್ಲಿ ಎರಡು ಕೊಠಡಿಗಳಲ್ಲಿ ತಂಗಿದರು. ಒಂದು ಕೊಠಡಿಯಲ್ಲಿ ಪಾರ್ಟಿ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ 9 ಗಂಟೆಗೆ ಆಕೆಯ ಗೆಳತಿ ಗೌರವ್ ನೊಂದಿಗೆ ಕೆಲವು ವಸ್ತುಗಳನ್ನು ತರಲು ಕೆಳ ಮಹಡಿಗೆ ಹೋಗಿದ್ದ ಸಂದರ್ಭ ಕೊಠಡಿಯಲ್ಲಿ ಉಳಿದಿದ್ದ ಸತೇಂದ್ರ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ತನ್ನ ಸ್ನೇಹಿತೆ ಹಿಂದಿರುಗಿದ ಬಳಿಕ ಘಟನೆಯ ಬಗ್ಗೆ ಮತ್ತೊಬ್ಬ ಪರಿಚಯಸ್ಥನಿಗೆ ಮಾಹಿತಿ ನೀಡಿದಳು. ಆರೋಪಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಕೂಡಲೇ ಪೊಲೀಸರನ್ನು ಸಂಪರ್ಕಿಸಿದಳು ಎಂದು ಸಂತ್ರಸ್ತೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ತಂಡ ಕೂಡಲೇ ಹೊಟೇಲ್‌ಗೆ ಧಾವಿಸಿ ಮೂವರು ಆರೋಪಿಗಳನ್ನು ಬಂಧಿಸಿದೆ ಎಂದು ಠಾಣಾಧಿಕಾರಿ ರಾಕೇಶ್ ಕುಮಾರ್ ಹೇಳಿದ್ದಾರೆ.