“ಅವರು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ”: ಸಂಸದರ ಅಮಾನತು ಕುರಿತು ಬಿಜೆಪಿ ಸಂಸದೆ ಹೇಮಾ ಮಾಲಿನಿ ಪ್ರತಿಕ್ರಿಯೆ
ಬಿಜೆಪಿ ಸಂಸದೆ ಹೇಮಾ ಮಾಲಿನಿ (PTI)
ಹೊಸದಿಲ್ಲಿ: ಸಂಸತ್ತಿನಿಂದ ಅಭೂತಪೂರ್ವ ಸಂಖ್ಯೆಯ ವಿಪಕ್ಷ ಸಂಸದರನ್ನು ಅಮಾನತುಗೊಳಿಸಿದ ವಿದ್ಯಮಾನದ ಕುರಿತು ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರ ಉತ್ತರ ಕುತೂಹಲಕಾರಿಯಾಗಿದೆ.
“ಅವರು ತೀರಾ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ವಿಚಿತ್ರವಾಗಿ ವರ್ತಿಸುತ್ತಾರೆ,” ಎಂದು ಹೇಮಾಮಾಲಿನಿ ಹೇಳಿದ್ದಾರೆ.
ವಿಪಕ್ಷಗಳ ಏಕೈಕ ಉದ್ದೇಶ ಸಂಸತ್ ಕಲಾಪಗಳಿಗೆ ಅಡ್ಡಿಯುಂಟು ಮಾಡುವುದು ಮತ್ತು ಮೋದಿ ಸರ್ಕಾರವನ್ನು ಉರುಳಿಸುವುದಾಗಿದೆ ಎಂದು ಅವರು ಹೇಳಿದ್ದಾರೆ.
“ಅವರನ್ನು ಅಮಾನತುಗೊಳಿಸಲಾಗಿದ್ದರೆ ಅವರೇನೋ ತಪ್ಪು ಮಾಡಿದ್ದಾರೆಂದು ಅರ್ಥ. ಸಂಸತ್ ನಿಯಮಗಳಂತೆ ಕಾರ್ಯನಿರ್ವಹಿಸಬೇಕಿದೆ. ಆದರೆ ಅವರು ಹಾಗೆ ಮಾಡುತ್ತಿಲ್ಲ ಅದಕ್ಕೆ ಅಮಾನತುಗೊಂಡಿದ್ದಾರೆ. ಅದರಲ್ಲಿ ತಪ್ಪೇನಿಲ್ಲ, ಅದು ಸರಿಯಾದ ಕ್ರಮ,” ಎಂದು ಹೇಮಾಮಾಲಿನಿ ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟದ ಸಭೆಯನ್ನೂ ಉಲ್ಲೇಖಿಸಿದ ಅವರು “ಸಂಸತ್ ಕಾರ್ಯನಿರ್ವಹಿಸಲು ಅವಕಾಶ ನೀಡದೇ ಇರುವುದು ಅವರ ಗುರಿ, ಅದಕ್ಕಾಗಿ ಅವರು ಬಹಳಷ್ಟು ಶ್ರಮಪಡುತ್ತಿದ್ದಾರೆ, ಆದರೆ ಯಶಸ್ವಿಯಾಗುವುದಿಲ್ಲ,” ಎಂದು ಅವರು ಹೇಳಿದ್ದಾರೆ.