×
Ad

ಹರ್ಯಾಣದಲ್ಲಿ ಮರ್ಯಾದೆಗೇಡು ಹತ್ಯೆ | ಅಂತರ್‌ಜಾತಿ ವಿವಾಹವಾದ ಸೋದರಿಯ ಹತ್ಯೆಗೈದ ಸೋದರ

ಪೊಲೀಸರಿಂದ ಎನ್‌ಕೌಂಟರ್; ಮೂವರು ಸಹಚರರೊಂದಿಗೆ ಆರೋಪಿಯ ಬಂಧನ

Update: 2025-11-21 21:30 IST

ಸಾಂದರ್ಭಿಕ ಚಿತ್ರ | Photo Credit : freepik.com

ಚಂಡೀಗಡ,ನ.21: ‘ಮಾರ್ಯಾದೆಗೇಡು’ ಹತ್ಯೆಯ ಪ್ರಕರಣವೊಂದರಲ್ಲಿ ಅಂತರ್‌ಜಾತಿ ವಿವಾಹವಾದ ತನ್ನ ಸಹೋದರಿಯನ್ನು ವ್ಯಕ್ತಿಯೊಬ್ಬ ಮೂವರು ಸ್ನೇಹಿತರ ಜೊತೆಗೂಡಿ ಗುಂಡಿಕ್ಕಿ ಹತ್ಯೆಗೈದ ಘಟನೆ ಹರ್ಯಾಣದಲ್ಲಿ ಶನಿವಾರ ನಡೆದಿದೆ.

ಆರೋಪಿಗಳು ಕೊಲೆಯಾದ ಯುವತಿಯ ಪತಿಯನ್ನು ಕೂಡಾ ಹತ್ಯೆಗೈಯಲು ಸಂಚು ಹೂಡಿದ್ದರೆನ್ನಲಾಗಿದೆ. ಆದರೆ ರೋಹ್ಟಕ್‌ ನ ಲಾಧೋಟ್-ಬೋಹಾರ್ ರಸ್ತೆಯಲ್ಲಿ ಆರೋಪಿಗಳೊಂದಿಗೆ ಎನ್‌ಕೌಂಟರ್ ನಡೆಸಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ.

23 ವರ್ಷ ವಯಸ್ಸಿನ ಸಪ್ನಾರನ್ನು ಆಕೆಯ ಸಹೋದರ ಹಾಗೂ ಆತ ಮೂವರು ಸ್ನೇಹಿತರು, ರೋಹ್ಟಕ್‌ ನ ಕಹ್ನಿ ಗ್ರಾಮದಲ್ಲಿರುವ ಪತಿಯ ಮನೆಯಲ್ಲಿ ಗುಂಡಿಕ್ಕಿ ಹತ್ಯೆಗೈದಿದ್ದರು.ದಾಳಿಯಲ್ಲಿ ಆಕೆಯ ಮೈದುನ ಸಾಹಿಲ್‌ ಗೆ ಗುಂಡಿನ ಗಾಯಗಳಾಗಿದ್ದು, ಆತ ರೋಹ್ಟಕ್‌ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಪ್ನಾ ಅವರು ಮೂರು ವರ್ಷಗ ಹಿಂದೆ ತನ್ನ ಕುಟುಂಬದ ವಿರೋಧದ ನಡುವೆ ಆಟೋಚಾಲಕನಾದ ಸೂರಜ್‌ ನನ್ನು ವಿವಾಹವಾಗಿದ್ದರು. ಈ ದಂಪತಿಗೆ ಓರ್ವ ಪುತ್ರಿಯಿದ್ದು, ಅವರು ಮೊದಲಿಗೆ ಸೂರಜ್ ಅವರ ಊರಾದ ಕಹ್ನಿ ಗ್ರಾಮದಿಂದ ದೂರ ಹೋಗಿ ನೆಲೆಸಿದ್ದರು. ಆದರೆ ಇತ್ತೀಚೆಗೆ ಅವರು ಗ್ರಾಮಕ್ಕೆ ವಾಪಸ್ ಬಂದಿದ್ದರು

ಬುಧವಾರ ರಾತ್ರಿ 9:40ರ ವೇಳೆಗೆ ಸಪ್ನಾ ಅವರ ಸಹೋದರ ಸಂಜು, ತನ್ನ ಮೂವರು ಸ್ನೇಹಿತರೊಂದಿಗೆ ಆಕೆಯ ಮನೆಗೆ ನುಗ್ಗಿ, ಗುಂಡಿನ ದಾಳಿ ನಡೆಸಿದ್ದಾನೆ. ಸಪ್ನಾ ಸ್ಥಳದಲ್ಲೇ ಮೃತಪಟ್ಟರೆ, ಸೂರಜ್‌ ನ ಸಹೋದರನಿಗೆ ಗುಂಡಿನ ಗಾಯಗಳಾಗಿವೆ. ದಾಳಿ ನಡೆದ ಸಮಯದಲ್ಲಿ ಸೂರಜ್ ಮನೆಯಲ್ಲಿರಲಿಲ್ಲವೆಂದು ತಿಳಿದುಬಂದಿದೆ.

ಆರೋಪಿಗಳು ಸೂರಜ್‌ ರನ್ನು ಹತ್ಯೆಗೈಯಲು ಸಂಚು ಹೂಡಿದ್ದು, ಅವರನ್ನು ಲಾಡೋತ್-ಬೋಹಾರ್ ರಸ್ತೆಯಲ್ಲಿ ಅಡ್ಡಗಟ್ಟಲು ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಂದು ಮಾಹಿತಿ ತಿಳಿದ ಪೊಲೀಸರು ಆ ಪ್ರದೇಶದಲ್ಲಿ ನಾಕಾಬಂದಿ ಏರ್ಪಡಿಸಿದ್ದರು. ಅಲ್ಲಿಗೆ ಆಗಮಿಸಿದ ಆರೋಪಿಗಳು, ಪೊಲೀಸರ ಮೇಲೆ ಗುಂಡು ಹಾರಿಸತೊಡಗಿದರು. ಆಗ ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿ ದಾಳಿಯಲ್ಲಿ ಎಲ್ಲಾ ನಾಲ್ವರು ಆರೋಪಿಗಳಿಗೂ ಗುಂಡೇಟುಗಳಾಗಿವೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ರೋಹ್ಟಕ್ ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News