×
Ad

ಪ್ರಧಾನಿ ಮೋದಿಯ ಅಮೆರಿಕ ಭೇಟಿಯ ನಡುವೆಯೇ ಶ್ವೇತಭವನದ ಮುಂದೆ ನೂರಾರು ಜನರ ಪ್ರತಿಭಟನೆ

Update: 2023-06-23 22:27 IST

Photo: PTI

ವಾಷಿಂಗ್ಟನ್: ಶ್ವೇತಭವನಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಭೇಟಿಯ ನಡುವೆಯೇ ಅವರ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ಕಿರುಕುಳಗಳ ವಿರುದ್ಧ ಪ್ರತಿಭಟಿಸಲು ನೂರಾರು ಭಾರತೀಯ ಅಮೆರಿಕನ್ ರು ಹೊರಗಡೆ ಜಮಾಯಿಸಿದ್ದರು. ಇದೇ ವೇಳೆ ಅತ್ತ ನ್ಯೂಯಾರ್ಕ್ ನಲ್ಲಿ ಮೋದಿ ವಿರುದ್ಧ ಪೋಸ್ಟರ್ ಗಳು ಪ್ರದರ್ಶಿಸಿಲ್ಪಟ್ಟಿದ್ದವು.

ನಾಗರಿಕ ಹಕ್ಕುಗಳು ಮತ್ತು ಅಂತರ್‌ಧರ್ಮೀಯ ಸಂಘಟನೆಗಳ ಒಕ್ಕೂಟ ‘ಕೋಯೆಲಿಷನ್ ಫಾರ್ ರಿಕ್ಲೇಮಿಂಗ್ ಇಂಡಿಯನ್ ಡೆಮಾಕ್ರಸಿ (CRID)’ ಆಯೋಜಿಸಿದ್ದ ಪ್ರತಿಭಟನೆಯು ದೇಶದಲ್ಲಿ ಹದಗೆಡುತ್ತಿರುವ ಪ್ರಜಾಪ್ರಭುತ್ವದ ಬಗ್ಗೆ ಜಾಗ್ರತಿಯನ್ನು ಮೂಡಿಸುವ ಉದ್ದೇಶವನ್ನು ಹೊಂದಿತ್ತು ಎಂದು ಹೇಳಿಕೆಯು ತಿಳಿಸಿದೆ. ಇದಕ್ಕೂ ಮುನ್ನ ಮೋದಿ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಸುಧಾರಿಸಲು ಮತ್ತು ವಾಕ್ ಸ್ವಾತಂತ್ರವನ್ನು ಎತ್ತಿ ಹಿಡಿಯಲು ತನ್ನ ಸರಕಾರವು ಕೈಗೊಂಡಿರುವ ಕ್ರಮಗಳ ಕುರಿತು ಅಮೆರಿಕನ್ ಪತ್ರಕರ್ತನೋರ್ವನ ಪ್ರಶ್ನೆಗೆ ಮೋದಿ, ತನ್ನ ಸರಕಾರವು ಸಂವಿಧಾನವನ್ನು ಅನುಸರಿಸುತ್ತಿದೆ, ಹೀಗಾಗಿ ಭಾರತದಲ್ಲಿ ಜಾತಿ ಅಥವಾ ಧರ್ಮದ ಆಧಾರದಲ್ಲಿ ತಾರತಮ್ಯದ ಪ್ರಶ್ನೆಯೇ ಇಲ್ಲ ಎಂದು ಉತ್ತರಿಸಿದರು. ಶ್ವೇತಭವನದ ಹೊರಗೆ ನಡೆದ ಪ್ರತಿಭಟನೆಯಲ್ಲಿ ವಿವಿಧ ಧಾರ್ಮಿಕ ಹಿನ್ನೆಲೆಗಳ ಜನರು ಪಾಲ್ಗೊಂಡಿದ್ದರು ಎಂದು ಸಿಆರ್ಐಡಿ ತಿಳಿಸಿದೆ.

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಕುರಿತು ಮಾತನಾಡಿದ ನಾರ್ಥ್ ಅಮೆರಿಕನ್ ಮಣಿಪುರ ಟ್ರೈಬಲ್ ಅಸೋಸಿಯೇಷನ್ ನ ಹಿರಿಯ ನಾಯಕ ಲಿಯೆನ್ ಗಾಂಗ್ಟೆ ಅವರು,ಪ್ರಧಾನಿಯವರು ಈ ಬಗ್ಗೆ ವೌನವಾಗಿದ್ದಾರೆ ಎಂದರು. ಹಿಂಸಾಚಾರವು ‘ಜನಾಂಗೀಯ ಶುದ್ಧೀಕರಣ’ವಾಗಿದೆ ಎಂದು ಅವರು ಬಣ್ಣಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಆಕಾಶಿ ಭಟ್,ಪ್ರಧಾನಿ ವಿರುದ್ಧ ಒಂದಾಗಿ ಧ್ವನಿಯೆತ್ತುವ ಅಗತ್ಯದ ಬಗ್ಗೆ ಮಾತನಾಡಿದರು. ಆಕಾಶಿ ಬಂಧನದಲ್ಲಿರುವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ ಭಟ್ ಅವರ ಪುತ್ರಿಯಾಗಿದ್ದಾರೆ.

ಹೇ ಜೋ! ಮೋದಿಯವರನ್ನು ಕೇಳಿ!

ಅತ್ತ ನ್ಯೂಯಾರ್ಕ್ ನಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಭಾರತದಲ್ಲಿ ಮಾನವ ಹಕ್ಕುಗಳನ್ನು ದಮನಿಸುತ್ತಿದೆ ಎಂದು ಆರೋಪಿಸಿ ಪೋಸ್ಟರ್ ಗಳನ್ನು ಪ್ರದರ್ಶಿಸಲಾಗಿತ್ತು. ಮಾನವ ಹಕ್ಕುಗಳ ಸ್ಥಿತಿಯ ಕುರಿತು ಮೋದಿಯವರನ್ನು ಪ್ರಶ್ನಿಸುವಂತೆ ಬೈಡೆನ್ ಅವರನ್ನು ಆಗ್ರಹಿಸುವ ಬ್ಯಾನರ್ ಗಳನ್ನು ಹೊತ್ತಿದ್ದ ಟ್ರಕ್ ಗಳು ನ್ಯೂಯಾರ್ಕ್ ನ ಬೀದಿಗಳಲ್ಲಿ ಕಂಡುಬಂದಿದ್ದವು.

‘‘ಹೇ ಜೋ, ‘ಇಂಡಿಯಾ:ದಿ ಮೋದಿ ಕ್ವೆಶ್ಚನ್ ’ಬಿಬಿಸಿ ಸಾಕ್ಷಚಿತ್ರವನ್ನು ನಿಷೇಧಿಸಿದ್ದು ಏಕೆ ಎಂದು ಮೋದಿಯನ್ನು ಪ್ರಶ್ನಿಸಿ ’’ ಎಂದು ಒಂದು ಬ್ಯಾನರ್ ಬೈಡೆನ್ ರನ್ನು ಆಗ್ರಹಿಸಿದ್ದರೆ, ಇನ್ನೊಂದು ಬ್ಯಾನರ್ ‘ಹೇ ಜೋ! ವಿಚಾರಣೆಯಿಲ್ಲದೆ ವಿದ್ಯಾರ್ಥಿ ಕಾರ್ಯಕರ್ತ ಉಮರ್ ಖಾಲಿದ್ ರನ್ನು ಸಾವಿರಕ್ಕೂ ಅಧಿಕ ದಿನಗಳಿಂದ ಬಂಧನದಲ್ಲಿ ಇರಿಸಿದ್ದು ಏಕೆ ಎಂದು ಮೋದಿಯನ್ನು ಪ್ರಶ್ನಿಸಿ ’ಎಂದು ಹೇಳಿತ್ತು.

ಅಲ್ಪಸಂಖ್ಯಾತ ಸಮುದಾಯಗಳ ಜನರ ಗುಂಪಿನಿಂದ ಥಳಿಸಿ ಹತ್ಯೆಗಳು ಆತಂಕಕಾರಿಯಾಗಿ ಹೆಚ್ಚುತ್ತಿರುವ ಬಗ್ಗೆ ಗಮನ ಸೆಳೆದಿದ್ದ ಇನ್ನೊಂದು ಪೋಸ್ಟರ್, ಮೋದಿ ಆಡಳಿತದಲ್ಲಿ ಮುಸ್ಲಿಮರು, ಕ್ರೈಸ್ತರು ಮತ್ತು ದಲಿತರನ್ನು ಗುಂಪುಗಳು ಥಳಿಸಿ ಕೊಲ್ಲುತ್ತಿವೆ ಎನ್ನುವುದು ನಿಮಗೆ ಗೊತ್ತೇ? ಅದೂ ಬಹುತೇಕ ಉತ್ತರದಾಯಿತ್ವವೇ ಇಲ್ಲದೇ ’ ಎಂದು ಹೇಳಿತ್ತು.

2005ರಿಂದ 2014ರವರೆಗೆ ಮೋದಿಯವರ ಅಮೆರಿಕ ಭೇಟಿಯನ್ನು ಏಕೆ ನಿರಾಕರಿಸಲಾಗಿತ್ತು ಎಂದು ಪ್ರಶ್ನಿಸಿದ ಒಂದು ಪೋಸ್ಟರ್, ವಿಶೇಷವಾಗಿ ಧಾರ್ಮಿಕ ಸ್ವಾತಂತ್ರ ಗಂಭೀರ ಉಲ್ಲಂಘನೆಗಳಿಗಾಗಿ ಎಂದು ಉತ್ತರವನ್ನೂ ನೀಡಿತ್ತು. ಭಾರತೀಯ ಪ್ರಧಾನಿ ಈ ಕಾರಣಗಳಿಂದಾಗಿ ಅಮೆರಿಕದ ವೀಸಾ ನಿರಾಕರಿಸಲ್ಪಟ್ಟಿದ್ದ ಏಕೈಕ ವ್ಯಕ್ತಿ ಎಂದೂ ಅದು ಬೆಟ್ಟು ಮಾಡಿತ್ತು.

ಬ್ಯಾನರ್ ಗಳು ಮೋದಿಯವರನ್ನು ‘ಕ್ರೈಂ ಮಿನಿಸ್ಟರ್ ಆಫ್ ಇಂಡಿಯಾ ’ಎಂದೂ ಬಣ್ಣಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News