×
Ad

ಅಕ್ರಮವಾಗಿ ಮತಾಂತರವಾದರೆ ವಿವಾಹ ಮಾನ್ಯವಲ್ಲ: ಅಲಹಾಬಾದ್ ಹೈಕೋರ್ಟ್

Update: 2025-09-24 17:20 IST

ಅಲಹಾಬಾದ್ ಹೈಕೋರ್ಟ್ (Photo: PTI)

ಪ್ರಯಾಗರಾಜ್: ಅಕ್ರಮ ಮತಾಂತರದ ಆಧಾರದ ಮೇಲೆ ನಡೆದ ವಿವಾಹವು ಕಾನೂನಿನ ದೃಷ್ಟಿಯಲ್ಲಿ ಅಮಾನ್ಯವಾಗುತ್ತದೆ ಮತ್ತು ಅಂತಹ ದಂಪತಿಗಳನ್ನು ವಿವಾಹಿತರಾಗಿ ಪರಿಗಣಿಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

ನ್ಯಾಯಮೂರ್ತಿ ಸೌರಭ್ ಶ್ರೀವಾಸ್ತವ ಅವರಿದ್ದ ಏಕಸದಸ್ಯ ಪೀಠವು ಮುಹಮ್ಮದ್ ಬಿನ್ ಖಾಸಿಮ್ ಅಲಿಯಾಸ್ ಅಕ್ಬರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿ ಈ ತೀರ್ಪು ನೀಡಿತು. ಖಾಸಿಮ್ ಅವರು ತಮ್ಮ ಪತ್ನಿ ಜೈನಾಬ್ ಪರ್ವೀನ್ ಅಲಿಯಾಸ್ ಚಂದ್ರಕಾಂತ ಅವರೊಂದಿಗೆ ನಡೆಸುತ್ತಿರುವ ವೈವಾಹಿಕ ಜೀವನದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಮನವಿ ಮಾಡಿದ್ದರು.

ಅರ್ಜಿದಾರರ ಪರ ವಕೀಲರು, 2025ರ ಫೆಬ್ರವರಿ 22ರಂದು ಚಂದ್ರಕಾಂತ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಖಾನ್ಕಾಹೆ ಅಲಿಯಾ ಅರಿಫಿಯಾ ಸಂಸ್ಥೆಯಿಂದ ಪ್ರಮಾಣಪತ್ರ ನೀಡಲಾಗಿದೆ ಎಂದು ಸಲ್ಲಿಸಿದರು. ನಂತರ ಮೇ 26ರಂದು ಮುಸ್ಲಿಂ ಕಾನೂನಿನ ಪ್ರಕಾರ ಮದುವೆಯಾದರು ಮತ್ತು ಕ್ವಾಜಿಯಿಂದ ವಿವಾಹ ಪ್ರಮಾಣಪತ್ರ ಪಡೆದಿದ್ದಾರೆಂದು ವಾದ ಮಂಡಿಸಿದರು.

ಆದರೆ ಹೆಚ್ಚುವರಿ ಮುಖ್ಯ ಸ್ಥಾಯಿ ವಕೀಲರು, ನೀಡಲಾಗಿದೆ ಎಂದು ಹೇಳಲಾದ ಮತಾಂತರ ಪ್ರಮಾಣಪತ್ರ ನಕಲಿ ಹಾಗೂ ಕಲ್ಪಿತ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದರು. ಜಾಮಿಯಾ ಅರಿಫಿಯಾ ಸಂಸ್ಥೆಯ ಅಧಿಕಾರಿಗಳು ಕೂಡ ಆ ದಿನಾಂಕದಲ್ಲಿ ಯಾವುದೇ ಪ್ರಮಾಣಪತ್ರ ನೀಡಿಲ್ಲ ಎಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು.

ದಾಖಲೆಗಳ ಪರಿಶೀಲನೆ ಬಳಿಕ ನ್ಯಾಯಾಲಯವು, “ನಕಲಿ ದಾಖಲೆ ಆಧಾರದ ಮೇಲೆ ನಡೆದ ಮತಾಂತರವು ಕಾನೂನುಬಾಹಿರ ಮತಾಂತರ ಕಾಯ್ದೆಯ ಅವಶ್ಯಕ ಅಂಶಗಳನ್ನು ಪೂರೈಸುವುದಿಲ್ಲ. ಆದ್ದರಿಂದ ಅಂತಹ ಮತಾಂತರದ ಆಧಾರದ ವಿವಾಹವು ಮುಸ್ಲಿಂ ಕಾನೂನಿನ ದೃಷ್ಟಿಯಲ್ಲಿ ಮಾನ್ಯವಾಗುವುದಿಲ್ಲ” ಎಂದು ತೀರ್ಮಾನಿಸಿತು.

ನ್ಯಾಯಾಲಯವು ಅರ್ಜಿದಾರರಿಗೆ ವಿಶೇಷ ವಿವಾಹ ಕಾಯ್ದೆಯಡಿ ಮದುವೆಯನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ಸೂಚಿಸಿದೆ. ಈ ಕಾಯ್ದೆಯಡಿಯಲ್ಲಿ ಮತಾಂತರದ ಅವಶ್ಯಕತೆ ಇಲ್ಲವೆಂದು ಸಹ ತಿಳಿಸಿದೆ.

ವಿಶೇಷ ವಿವಾಹ ಕಾಯ್ದೆಯಡಿ ಪ್ರಮಾಣಪತ್ರ ದೊರಕುವವರೆಗೆ, ಎರಡನೇ ಅರ್ಜಿದಾರ (ಚಂದ್ರಕಾಂತ) ಅವರನ್ನು ಪ್ರಯಾಗರಾಜ್‌ ನ ಮಹಿಳಾ ರಕ್ಷಣಾ ಗೃಹದಲ್ಲಿ ಇರಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಪೋಷಕರೊಂದಿಗೆ ವಾಸಿಸಲು ಅವರು ನಿರಾಕರಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ, ನ್ಯಾಯಾಲಯವು ಅರ್ಜಿದಾರರ ಪರ ವಕೀಲರಿಗೆ 25,000 ರೂಪಾಯಿ ದಂಡ ವಿಧಿಸಿ, ಅದನ್ನು 15 ದಿನಗಳೊಳಗೆ ಮಧ್ಯಸ್ಥಿಕೆ ಮತ್ತು ರಾಜಿ ಕೇಂದ್ರದಲ್ಲಿ ಠೇವಣಿ ಇಡಲು ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News