×
Ad

ರಾಮ ಜನ್ಮಭೂಮಿಯನ್ನು ಮರಳಿ ಪಡೆದುಕೊಳ್ಳಲು ನಮಗೆ ಸಾಧ್ಯವಾಗಿದ್ದರೆ ಸಿಂಧ್ ಏಕೆ ಸಾಧ್ಯವಿಲ್ಲ?: ಆದಿತ್ಯನಾಥ್

Update: 2023-10-09 17:36 IST

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ (PTI)

ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಳ್ಳುತ್ತಿರುವ ಭೂಮಿಯನ್ನು ಮರಳಿ ಪಡೆದುಕೊಳ್ಳಬಹುದಾಗಿದ್ದರೆ ಈಗ ಪಾಕಿಸ್ತಾನದಲ್ಲಿರುವ ಸಿಂಧ್ ಪ್ರಾಂತ್ಯವನ್ನೂ ಭಾರತವು ಮರಳಿ ಪಡೆದುಕೊಳ್ಳಲು ಸಾಧ್ಯವಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.

ರವಿವಾರ ಇಲ್ಲಿ ಎರಡು ದಿನಗಳ ರಾಷ್ಟ್ರೀಯ ಸಿಂಧ್ ಸಮಾವೇಶದಲ್ಲಿ ಮಾತನಾಡಿದ ಅವರು, ’500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಗೊಳ್ಳುತ್ತಿದೆ. ಪ್ರಧಾನಿಯವರು ಜನವರಿಯಲ್ಲಿ ರಾಮ ಲಲ್ಲಾನನ್ನು ಆತನ ಮಂದಿರದಲ್ಲಿ ಆಸೀನಗೊಳಿಸಲಿದ್ದಾರೆ. 500 ವರ್ಷಗಳ ಬಳಿಕ ರಾಮ ಜನ್ಮಭೂಮಿಯನ್ನು ಮರಳಿ ಪಡೆದುಕೊಳ್ಳಲು ಸಾಧ್ಯವಾಗಿದ್ದರೆ ಸಿಂಧ್ ಅನ್ನು ನಾವೇಕೆ ಮರಳಿ ಪಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುವುದಕ್ಕೆ ಯಾವುದೇ ಕಾರಣವಿಲ್ಲ’ ಎಂದು ಹೇಳಿದರು.

ಸಮಾವೇಶದಲ್ಲಿ ಹತ್ತು ದೇಶಗಳು ಮತ್ತು ಹತ್ತು ಭಾರತೀಯ ರಾಜ್ಯಗಳಿಂದ 225ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಿಂಧಿ ಸಮದಾಯವು ಇಂದಿನ ಪೀಳಿಗೆಗೆ ತನ್ನ ಇತಿಹಾಸವನ್ನು ಬೋಧಿಸುವ ಅಗತ್ಯವಿದೆ. ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಈ ಸಮುದಾಯವು ಅತ್ಯಂತ ಹೆಚ್ಚಿನ ಸಂಕಷ್ಟವನ್ನು ಅನುಭವಿಸಿತ್ತು ಎಂದ ಆದಿತ್ಯನಾಥ,1947ರ ವಿಭಜನೆಯು ಒಂದು ದುರಂತವಾಗಿತ್ತು. ಅದನ್ನು ತಪ್ಪಿಸಬಹುದಿತ್ತು. ಓರ್ವ ವ್ಯಕ್ತಿಯ ಹಠಮಾರಿತನದಿಂದಾಗಿ ದೇಶವು ವಿಭಜನೆಯ ದುರಂತಕ್ಕೆ ಸಾಕ್ಷಿಯಾಗಬೇಕಾಯಿತು. ಇದರಿಂದಾಗಿ ಲಕ್ಷಾಂತರ ಜನರು ಕೊಲ್ಲಲ್ಪಟ್ಟರು. ಭಾರತದ ಭೂಪ್ರದೇಶದ ದೊಡ್ಡ ಭಾಗ ಪಾಕಿಸ್ತಾನವಾಯಿತು ಎಂದರು.

ಆದರೆ ಸಿಂಧಿ ಸಮುದಾಯವು ಯಾವುದೇ ಗದ್ದಲವನ್ನೆಬ್ಬಿಸಲಿಲ್ಲ ಮತ್ತು ಹಲವಾರು ಹಿನ್ನಡೆಗಳ ನಡುವೆಯೂ ತನ್ನ ಪಯಣವನ್ನು ಮುಂದುವರಿಸಲು ಮತ್ತೆ ಎದ್ದು ನಿಂತಿತ್ತು ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News