×
Ad

ಎಸ್‌ಐಆರ್ ವಿರೋಧಿಸಿ ನಾಳೆ (ಆ.11) ಇಂಡಿಯಾ ಮೈತ್ರಿಕೂಟದ ಸಂಸದರಿಂದ ಚುನಾವಣಾ ಆಯೋಗದ ಕಚೇರಿಗೆ ಪಾದಯಾತ್ರೆ

Update: 2025-08-10 17:00 IST

File Photo: PTI

ಹೊಸದಿಲ್ಲಿ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಮೂಲಕ ಮತಗಳ್ಳತನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಇಂಡಿಯಾ ಮೈತ್ರಿಕೂಟದ ಸಂಸದರು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಾಳೆ (ಆಗಸ್ಟ್ 11) ಸಂಸತ್ ಭವನದಿಂದ ಚುನಾವಣಾ ಆಯೋಗದ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಈ ವೇಳೆ ಇಂಡಿಯಾ ಮೈತ್ರಿಕೂಟದ ಸಂಸತ್ತಿನ ಸದನದ ನಾಯಕರು ಚುನಾವಣಾ ಆಯುಕ್ತರನ್ನು ಭೇಟಿ ಮಾಡಲೂ ಇಚ್ಛಿಸಿದ್ದಾರೆ ಎಂದು ವರದಿಯಾಗಿದೆ.

ವಿರೋಧ ಪಕ್ಷಗಳ ಮೈತ್ರಿಕೂಟದ ಉನ್ನತ ನಾಯಕರಿಗೆ ರಾಹುಲ್ ಗಾಂಧಿ ಔತಣ ಕೂಟ ಏರ್ಪಡಿಸಿದ ನಂತರ, ಸೋಮವಾರ ಸಂಜೆ ರಾಜ್ಯಸಭಾ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಇಂಡಿಯಾ ಮೈತ್ರಿಕೂಟದ ಸಂಸದರಿಗಾಗಿ ಔತಣ ಕೂಟ ಆಯೋಜಿಸಿದ್ದಾರೆ.

ಸೋಮವಾರ ಬೆಳಗ್ಗೆ ಸುಮಾರು 11.30 ಗಂಟೆಗೆ ಸಂಸತ್ ಭವನದಿಂದ ಇಂಡಿಯಾ ಮೈತ್ರಿಕೂಟದ ಸಂಸದರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದಕ್ಕೂ ಮುನ್ನ, ಕರ್ನಾಟಕದ ಮಹಾದೇವಪುರ ಚುನಾವಣಾ ವಿಶ್ಲೇಷಣೆಯನ್ನು ಪ್ರಸ್ತುತ ಪಡಿಸಿದ್ದ ರಾಹುಲ್ ಗಾಂಧಿ, ಈ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷ ಮತಗಳ್ಳತನ ನಡೆಸಲಾಗಿದೆ ಎಂದು ಆರೋಪಿಸಿದ ಬೆನ್ನಿಗೇ ಈ ಪ್ರತಿಭಟನಾ ಪಾದಯಾತ್ರೆಯನ್ನು ಆಯೋಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News