×
Ad

"ಭಾರತ ಒಂದು ರಾಷ್ಟ್ರವಲ್ಲ": ಎರಡು ಮಕ್ಕಳ ನೀತಿ ಕುರಿತು ಒಡಿಶಾ ಹೈಕೋರ್ಟ್ ತೀರ್ಪಿನಲ್ಲಿ ಚರ್ಚಿಲ್ ಹೇಳಿಕೆ ಉಲ್ಲೇಖ

Update: 2026-01-30 16:33 IST

ಸಾಂದರ್ಭಿಕ ಚಿತ್ರ (AI)

ಭುವನೇಶ್ವರ: ಎರಡು ಮಕ್ಕಳ ಶಾಸನಬದ್ಧ ಮಿತಿಯನ್ನು ಮೀರಿದ್ದಕ್ಕಾಗಿ ಅನರ್ಹಗೊಂಡ ಗ್ರಾಮ ಪಂಚಾಯತ್ ಸದಸ್ಯರೋರ್ವರು ಸಲ್ಲಿಸಿದ್ದ ಅರ್ಜಿಯನ್ನು ಒಡಿಶಾ ಉಚ್ಚ ನ್ಯಾಯಾಲಯವು ವಜಾಗೊಳಿಸಿದೆ. ಅಧಿಕ ಜನಸಂಖ್ಯೆ ಕುರಿತು ಮಾಜಿ ಬ್ರಿಟಿಷ್ ಪ್ರಧಾನಿ ವಿನ್ಸ್ಟ್‌ನ್ ಚರ್ಚಿಲ್, ಬ್ರಿಟಿಷ್ ತತ್ವಜ್ಞಾನಿ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಬಟ್ರಂಡ್ ರಸೆಲ್ ಮತ್ತು ಬ್ರಿಟಿಷ್ ಅರ್ಥಶಾಸ್ತ್ರಜ್ಞ ಥಾಮಸ್ ರಾಬರ್ಟ್ ಮಾಲ್ತಸ್ ಅವರ ಐತಿಹಾಸಿಕ ಮತ್ತು ತಾತ್ವಿಕ ಹೇಳಿಕೆಗಳನ್ನು ಅದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ನ್ಯಾಯಮೂರ್ತಿಗಳಾದ ಶ್ರೀಪಾದ ದೀಕ್ಷಿತ್ ಮತ್ತು ಚಿತ್ತರಂಜನ ದಾಸ್ ಅವರ ಪೀಠವು ಏಕ ನ್ಯಾಯಾಧೀಶರು ಹೊರಡಿಸಿದ್ದ ಅನರ್ಹತೆ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೆಲ್ಮನವಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.

ಅಧಿಕ ಜನಸಂಖ್ಯೆಯ ಅನಾನುಕೂಲತೆಗಳನ್ನು ಎತ್ತಿ ತೋರಿಸಿದ ನ್ಯಾಯಾಲಯವು,ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದ ಜನರು ಎದುರಿಸಿದ್ದ ತೊಂದರೆಗಳ ನೆನಪು ಇನ್ನೂ ಮಾಸಿಲ್ಲ. ಸ್ಥಳಾವಕಾಶದ ಕೊರತೆಯಿಂದಾಗಿ ಜನರಿಗೆ ಸುರಕ್ಷಿತ ಅಂತರವನ್ನೂ ಕಾಯ್ದುಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ಹೇಳಿತು.

ತೀರ್ಪನ್ನು ಬರೆದ ನ್ಯಾ.ದೀಕ್ಷಿತ್, ‘ಭಾರತವು ಒಂದು ರಾಷ್ಟ್ರವಲ್ಲ,‌ ಅದು ಕೇವಲ ಜನಸಂಖ್ಯೆ’ ಎಂಬ ಚರ್ಚಿಲ್ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

ವಿಭಜನೆಗಿಂತ ತುಂಬ ಹಿಂದೆಯೇ, ಅವಿಭಜಿತ ಭಾರತದ ಆಗಿನ ಜನಸಂಖ್ಯೆ ಸುಮಾರು 30 ಕೋಟಿಗಳಷ್ಟಿದ್ದಾಗ ಚರ್ಚಿಲ್ ಈ ಮಾತನ್ನು ಹೇಳಿದ್ದರು. ಇಂದು ಅವರು ಜೀವಂತವಿದ್ದಿದ್ದರೆ ಎಂತಹ ಕಟುವಾದ ಹೇಳಿಕೆಯನ್ನು ಅವರು ನೀಡುತ್ತಿದ್ದರು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಪೀಠವು ಹೇಳಿತು.

ಹೆಚ್ಚುತ್ತಿರುವ ಜನಸಂಖ್ಯೆ ಅಪಾಯವನ್ನು ಎತ್ತಿ ತೋರಿಸಿದ ನ್ಯಾಯಾಧೀಶರು, ‘ಜನಸಂಖ್ಯಾ ಸ್ಫೋಟವು ಜಲಜನಕ ಬಾಂಬ್‌ಗಿಂತ ಹೆಚ್ಚು ಅಪಾಯಕಾರಿ’ ಎಂಬ ರಸೆಲ್ ಮಾತನ್ನೂ ಉಲ್ಲೇಖಿಸಿದರು.

‘ಜನಸಂಖ್ಯೆ ಹೆಚ್ಚಳದ ಅನುಪಾತವು ಅದರ ಗರಿಷ್ಠ ಪ್ರಮಾಣಕ್ಕಿಂತ ಕಡಿಮೆಯಿದ್ದರೂ ಅನುಭವದ ಆಧಾರದಲ್ಲಿ ನಾವಿದನ್ನು ನಿಯಮವಾಗಿ ಪರಿಗಣಿಸುತ್ತೇವೆ; ಜನಸಂಖ್ಯೆಯನ್ನು ನಿಯಂತ್ರಿಸದಿದ್ದರೆ ಅದು ಪ್ರತಿ 25 ವರ್ಷಗಳಿಗೆ ದ್ವಿಗುಣಗೊಳ್ಳುತ್ತಲೇ ಇರುತ್ತದೆ ಅಥವಾ ಜ್ಯಾಮಿತೀಯ ಅನುಪಾತದಲ್ಲಿ ಹೆಚ್ಚುತ್ತಿರುತ್ತದೆ’ ಎಂಬ ಥಾಮಸ್ ರಾಬರ್ಟ್ ಮಾಲ್ತಸ್ ಅವರ ಹೇಳಿಕೆಯನ್ನೂ ತೀರ್ಪು ಉಲ್ಲೇಖಿಸಿದೆ.

ಬ್ರಿಟಿಷ್ ಕವಿ ಲಾರ್ಡ್ ಬೈರನ್ ಅವರ ‘ಚೈಲ್ಡ್ ಹೆರಾಲ್ಡ್ಸ್‌ಪಿಲ್‌ಗ್ರಿಮೇಜ್’ನ ಕೆಲವು ಸಾಲುಗಳನ್ನೂ ಉಲ್ಲೇಖಿಸಿರುವ ತೀರ್ಪು, ‘ಒಂದು ದೇಶವನ್ನು ನಿರ್ಮಿಸಲು ಸಾವಿರ ವರ್ಷಗಳೂ ಸಾಲುವುದಿಲ್ಲ; ಒಂದು ಗಂಟೆಯು ಅದನ್ನು ಧೂಳಿಪಟಗೊಳಿಸಬಹುದು’ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News