×
Ad

Rajasthan| ಸಾಧ್ವಿ ಪ್ರೇಮ್ ಬೈಸಾ ನಿಗೂಢ ಸಾವು: ಪೊಲೀಸರಿಂದ ತನಿಖೆ

Update: 2026-01-30 14:34 IST

ಸಾಧ್ವಿ ಪ್ರೇಮ್ ಬೈಸಾ (Photo: indiatoday.in) 

ಜೈಪುರ: ರಾಜಸ್ಥಾನದ ಜೋಧ್‌ಪುರದ ರದ ಬೋರನಾಡ ಆಶ್ರಮದ ಧಾರ್ಮಿಕ ಪ್ರಚಾರಕಿ ಸಾಧ್ವಿ ಪ್ರೇಮ್ ಬೈಸಾ ಅವರು ನಿಗೂಢವಾಗಿ ಮೃತಪಟ್ಟಿದ್ದಾರೆ. ಘಟನೆ ಅವರ ಅನುಯಾಯಿಗಳಿಗೆ ಆಘಾತವನ್ನುಂಟುಮಾಡಿದೆ. ರಾಜಕೀಯ ನಾಯಕ ಹನುಮಾನ್ ಬೇನಿವಾಲ್ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.

ಸಾಧ್ವಿ ಪ್ರೇಮ್ ಬೈಸಾ ಅವರು ಕಳೆದ ಎರಡು ದಿನಗಳಿಂದ ಅಸ್ವಸ್ಥರಾಗಿದ್ದರು. ಬುಧವಾರ ಆಶ್ರಮಕ್ಕೆ ಬಂದ ವ್ಯಕ್ತಿ ಅವರಿಗೆ ಇಂಜೆಕ್ಷನ್ ನೀಡಿದ್ದರು. ಇದಾದ ಸ್ವಲ್ಪ ಸಮಯದ ನಂತರ ಅವರ ಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಸಾಧ್ವಿ ಅವರ ತಂದೆ ಆಕೆಯನ್ನು ಪಾಲ್ ರಸ್ತೆಯಲ್ಲಿರುವ ಪ್ರೇಕ್ಷಾ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ. ಸಾಧ್ವಿ ಪ್ರೇಮ್ ಬೈಸಾ ನಿಧನದ ಸುದ್ದಿ ಅವರ ಬೆಂಬಲಿಗರಲ್ಲಿ ಆಘಾತವನ್ನುಂಟು ಮಾಡಿದೆ.

ಆಸ್ಪತ್ರೆಯ ನಿರ್ದೇಶಕ ಡಾ.ಪ್ರವೀಣ್ ಜೈನ್ ಈ ಕುರಿತು ಪ್ರತಿಕ್ರಿಯಿಸಿ, ಪ್ರೇಮ್ ಬೈಸಾ ಅವರನ್ನು ಮೃತಪಟ್ಟ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಯಿತು. ಶಿಷ್ಟಾಚಾರದ ಪ್ರಕಾರ ಶಾಸ್ತ್ರಿ ನಗರ ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಮೃತದೇಹವನ್ನು ಎಂಡಿಎಂ ಆಸ್ಪತ್ರೆಗೆ ಕೊಂಡೊಯ್ಯಲು ಕುಟುಂಬಕ್ಕೆ ಸೂಚಿಸಲಾಗಿದೆ. ಆದರೆ ಅವರು ಮೃತದೇಹವನ್ನು ಬೊರನಾಡದಲ್ಲಿರುವ ಆಕೆಯ ಆಶ್ರಮಕ್ಕೆ ಕೊಂಡೊಯ್ದರು ಎಂದು ಹೇಳಿದ್ದಾರೆ.

ಮಾಹಿತಿ ಪಡೆದ ನಂತರ, ಬೋರನಾಡ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ ಹೇಮರಾಜ್ ಆಶ್ರಮಕ್ಕೆ ತೆರಳಿ ಸಾಧ್ವಿ ಪ್ರೇಮ್ ಬೈಸಾ ಅವರ ಕೊಠಡಿಯನ್ನು ಬಂದ್ ಮಾಡಿದ್ದಾರೆ. ತಡರಾತ್ರಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂಡಿಎಂ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಇದಾದ ಸುಮಾರು ನಾಲ್ಕು ಗಂಟೆಗಳ ನಂತರ, ರಾತ್ರಿ 9.30ರ ಸುಮಾರಿಗೆ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಆತ್ಮಹತ್ಯೆ ಟಿಪ್ಪಣಿಯನ್ನು ಹೋಲುವ ಪೋಸ್ಟ್ ಕಂಡು ಬಂದಿದೆ. ಇದಾದ ಬಳಿಕ ಪ್ರಕರಣ ವಿಭಿನ್ನ ತಿರುವು ಪಡೆದುಕೊಂಡಿದೆ. ಪೋಸ್ಟ್‌ನಲ್ಲಿ ಅಗ್ನಿ ಪರೀಕ್ಷೆ, ವಿದಾಯ ಮತ್ತು ನ್ಯಾಯ ಎಂದು ಉಲ್ಲೇಖಿಸಲಾಗಿದೆ.

“ನಾನು ಈ ಜಗತ್ತಿಗೆ ಶಾಶ್ವತವಾಗಿ ವಿದಾಯ ಹೇಳುತ್ತಿದ್ದೇನೆ. ಆದರೆ ನನಗೆ ದೇವರು ಮತ್ತು ಪೂಜ್ಯ ಸಂತರು ಮತ್ತು ಋಷಿಗಳಲ್ಲಿ ಸಂಪೂರ್ಣ ನಂಬಿಕೆ ಇದೆ. ನನ್ನ ಜೀವಿತಾವಧಿಯಲ್ಲಿ ಇಲ್ಲದಿದ್ದರೆ, ನನ್ನ ಮರಣದ ನಂತರ ನನಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಪೋಸ್ಟ್ ಅನ್ನು ಬೇರೆ ಯಾರಾದರೂ ಅಪ್ಲೋಡ್ ಮಾಡಿದ್ದಾರೋ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಳೆದ ಜುಲೈನಲ್ಲಿ ಸಾಧ್ವಿ ಪ್ರೇಮ್ ಬೈಸಾ ತನ್ನ ಗುರುವಾದ ಸ್ವಾಮೀಜಿಯನ್ನು ತಬ್ಬಿಕೊಂಡು, ಅಪ್ಪಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದು ವಿವಾದವನ್ನು ಸೃಷ್ಟಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News