ತಿರುಪತಿ ಲಡ್ಡಿಗೆ ಕಲಬೆರಕೆ ತುಪ್ಪ ಬಳಕೆ: 234 ಕೋಟಿ ರೂ. ವಂಚನೆ ಬಗ್ಗೆ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ
"ಸಸ್ಯಜನ್ಯ ಎಣ್ಣೆ" ಬಳಸಿ ತುಪ್ಪ ತಯಾರಿಸಲಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗ
ಸಾಂದರ್ಭಿಕ ಚಿತ್ರ (source: X)
ಹೈದರಾಬಾದ್: ತಿರುಮಲದ ಪವಿತ್ರ ಲಡ್ಡು ಪ್ರಸಾದಕ್ಕೆ ಬಳಸುವ ಹಸುವಿನ ತುಪ್ಪದ ಕಲಬೆರಕೆ ಆರೋಪದ ಕುರಿತು ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ ನಡೆಸಿದ ತನಿಖೆಯಲ್ಲಿ "ಸಸ್ಯಜನ್ಯ ಎಣ್ಣೆ" ವಂಚನೆ ಬಹಿರಂಗಗೊಂಡಿದೆ. ಪ್ರಯೋಗಾಲಯದ ವರದಿಗಳು ಟ್ಯಾಲೋ, ಹಂದಿ ಕೊಬ್ಬು ಅಥವಾ ಮೀನಿನ ಎಣ್ಣೆಯಂತಹ ಪ್ರಾಣಿಗಳ ಕೊಬ್ಬಿನ ಬಳಕೆಯ ಸಾಧ್ಯತೆ ವಿರಳವಾಗಿದೆ ಎಂದು ಹೇಳಿದೆ.
ಸಿಬಿಐ ವಿಶೇಷ ತನಿಖಾ ತಂಡವು ಈ ಕುರಿತು ಅಂತಿಮ ಚಾರ್ಜ್‌ಶೀಟ್ ಸಲ್ಲಿಸಿದ್ದು, 234 ಕೋಟಿ ರೂ. ಮೊತ್ತದ ವಂಚನೆಯಲ್ಲಿ 9 ಮಂದಿ ಟಿಟಿಡಿ ಅಧಿಕಾರಿಗಳು ಮತ್ತು 5 ಮಂದಿ ಡೈರಿ ತಜ್ಞರು ಸೇರಿದಂತೆ 36 ಜನರನ್ನು ಆರೋಪಿಗಳೆಂದು ಹೆಸರಿಸಿದೆ. ಶುಕ್ರವಾರ ನೆಲ್ಲೂರು ಎಸಿಬಿ ನ್ಯಾಯಾಲಯಕ್ಕೆ ಈ ಕುರಿತ ವರದಿಯನ್ನು ಸಲ್ಲಿಸಿದೆ.
ಉತ್ತರ ಪ್ರದೇಶದ ಭಗವಾನ್ಪುರದ ಭೋಲೆ ಬಾಬಾ ಆರ್ಗಾನಿಕ್ ಡೈರಿ ಮಿಲ್ಕ್ ಪ್ರೈವೇಟ್ ಲಿಮಿಟೆಡ್‌ನ ಪೋಮಿಲ್ ಜೈನ್ ಮತ್ತು ವಿಪಿನ್ ಜೈನ್ ನಕಲಿ ಅಗ್ಮಾರ್ಕ್ ಹಸುವಿನ ತುಪ್ಪ ಉತ್ಪಾದನೆಯ ಪ್ರಮುಖ ಆರೋಪಿಗಳು. ಬಳಿಕ ತಿರುಪತಿಯ ಶ್ರೀ ವೈಷ್ಣವಿ ಡೇರಿ, ಮಹಾರಾಷ್ಟ್ರದ ಮಲ್ಗಂಗಾ ಮಿಲ್ಕ್ ಮತ್ತು ತಮಿಳುನಾಡಿನ ದಿಂಡಿಗಲ್‌ನ ಎಆರ್ ಡೇರಿಯ ಮೂಲಕ ಕಲಬೆರಕೆ ತುಪ್ಪವನ್ನು ಸರಬರಾಜು ಮಾಡುತ್ತಿದ್ದರು ಎನ್ನುವುದು ತಿಳಿದು ಬಂದಿದೆ.
ಭೋಲೆ ಬಾಬಾ ಆರ್ಗ್ಯಾನಿಕ್ ಸೇರಿದಂತೆ ವಿವಿಧ ಡೇರಿಗಳಿಂದ 59.7 ಲಕ್ಷ ಕೆ.ಜಿ ಕಲಬೆರಕೆ ತುಪ್ಪವನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪೂರೈಸಿದ್ದು, ತಿರುಮಲ ತಿರುಪತಿ ದೇವಸ್ಥಾನಕ್ಕೆ 234.51 ಕೋಟಿ ರೂ. ನಷ್ಟವನ್ನುಂಟು ಮಾಡಿದೆ. ಟಿಟಿಡಿ ನೌಕರರು ಚಿನ್ನಾಭರಣ, ಮೊಬೈಲ್, ಹಣದ ಆಮಿಷಕ್ಕೆ ಒಳಗಾಗಿ ನಕಲಿ ತುಪ್ಪ ಪೂರೈಕೆದಾರರಿಗೆ ಅನುಕೂಲಕರ ವರದಿಗಳನ್ನು ನೀಡಿದ್ದಾರೆ. ನಕಲಿ ಎಫ್ಎಸ್ಎಸ್ಎಐ ದಾಖಲೆಗಳಲ್ಲಿ ತುಪ್ಪ ಖರೀದಿ ಅಂಕಿಅಂಶಗಳನ್ನು ತಿರುಚಲಾಗಿದೆ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೋಲೆ ಬಾಬಾ ಡೇರಿಯಿಂದ 9.9 ಲಕ್ಷ ಕೆ.ಜಿ, ವೈಷ್ಣವಿ ಡೇರಿಯಿಂದ 33 ಲಕ್ಷ ಕೆ.ಜಿ, ಮಳಗಂಗಾ ಡೇರಿಯಿಂದ 15.8 ಲಕ್ಷ ಕೆ.ಜಿ ಮತ್ತು ಎಆರ್ ಡೇರಿಯಿಂದ 0.68 ಲಕ್ಷ ಕೆ.ಜಿ ಕಲಬೆರಕೆ ತುಪ್ಪವನ್ನು ಪೂರೈಸಲಾಗಿದೆ. ಹಸುವಿನ ಹಾಲು ಅಥವಾ ಬೆಣ್ಣೆ ಇಲ್ಲದೆ ತುಪ್ಪ ಉತ್ಪಾದಿಸಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.