ಆಸ್ಕರ್ ಪ್ರಶಸ್ತಿಗೆ ಪಟ್ಟಿ ಮಾಡಲಾದ ಚಿತ್ರಗಳ ಪೈಕಿ ಭಾರತದ ಈ ಚಿತ್ರಕ್ಕೆ ಸ್ಥಾನ
PC | X
ಮುಂಬೈ: ಪ್ರಸಕ್ತ ಸಾಲಿನ ಆಸ್ಕರ್ ಪ್ರಶಸ್ತಿಗೆ ಪಟ್ಟಿ ಮಾಡಲಾದ ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಫಿಲ್ಮ್ ವರ್ಗದಲ್ಲಿ 'ಹೋಮ್‍ಬೌಂಡ್' ಚಿತ್ರ ಭಾರತದಿಂದ ಆಯ್ಕೆಯಾಗಿದೆ. 98ನೇ ಅಕಾಡೆಮಿ ಅವಾರ್ಡ್‍ಗಾಗಿ 12 ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುವ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಸಾಕ್ಷ್ಯಚಿತ್ರಗಳು, ಗೀತೆ, ಸ್ಕೋರ್, ಸಿನಿಮಟೋಗ್ರಫಿ, ಸೌಂಡ್, ವಿಶುವಲ್ ಎಫೆಕ್ಟ್, ಮೇಕಪ್ ಮತ್ತು ಕೇಶವಿನ್ಯಾಸ ಹಾಗೂ ಹೊಸದಾಗಿ ಪರಿಚಯಿಸಲಾದ ಕ್ಯಾಸ್ಟಿಂಗ್ ವರ್ಗ ಸೇರಿದೆ. 86 ಅರ್ಹ ದೇಶ ಹಾಗೂ ಪ್ರದೇಶಗಳ 15 ಚಿತ್ರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಅಂತರರಾಷ್ಟ್ರೀಯ ಫೀಚರ್ ಫಿಲ್ಮ್ ಪಟ್ಟಿಯು ವಿಶ್ವದ ವಿವಿಧೆಡೆಗಳ ಸಿನಿಮಾಗಳನ್ನು ಪ್ರದರ್ಶಿಸುತ್ತದೆ. ಅರ್ಜೆಂಟೀನಾದ 'ಬೆಲೆನ್'. ಬ್ರೆಜಿಲ್‍ನ 'ದ ಸೀಕ್ರೆಟ್ ಏಜೆಂಟ್'. ಫ್ರಾನ್ಸ್‍ನ 'ಇಟ್ ವಾಸ್ ಜೆಸ್ಟ್ ಆ್ಯನ್ ಆ್ಯಕ್ಸಿಡೆಂಟ್'. ಜರ್ಮನಿಯ 'ಸೌಂಡ್ ಆಫ್ ಫಾಲಿಂಗ್', ಇರಾಕ್ ನ 'ದ ಪ್ರಸಿಡೆಂಟ್ಸ್ ಕೇಕ್'. ಜಪಾನ್‍ನ 'ಕೊಖೋ'. ಜೋರ್ಡಾನ್‍ನ 'ಆಲ್ ದಟ್ಸ್ ಲೆಫ್ಟ್ ಆಫ್ ಯೂ' ನಾರ್ವೆಯ 'ಸೆಂಟಿಮೆಂಟಲ್ ವ್ಯಾಲ್ಯೂ'. ಫೆಲೆಸ್ತೀನ್‌ನ 'ಫೆಲೆಸ್ತೀನ್ 36', ದಕ್ಷಿಣ ಕೊರಿಯಾದ 'ನೋ ಅದರ್ ಚಾಯ್ಸ್', ಸ್ಪೇನ್‍ನ 'ಸಿರಟ್' ಸ್ವಿಡ್ಜರ್‍ಲೆಂಡ್‍ನ 'ಲೇಟ್ ಶಿಫ್ಟ್' ತೈವಾನ್‍ನ ಲೆಫ್ಟ್ ಹ್ಯಾಂಡೆಡ್ ಗರ್ಲ್, ಟ್ಯೂನೇಷಿಯಾದ ದ ವಾಯ್ಸ್ ಆಫ್ ಹಿಂದ್ ರಜಬ್ ಮತ್ತು ಭಾರತದ ಹೋಮ್‍ಬೌಂಡ್ ಈ ಪಟ್ಟಿಯಲ್ಲಿವೆ.
ಪ್ರಾಥಮಿಕ ಮತದಾನ ಪ್ರಕ್ರಿಯೆಯಲ್ಲಿ ಅಕಾಡೆಮಿಯ ಎಲ್ಲ ಶಾಖೆಗಳ ಸದಸ್ಯರು ಪಾಲ್ಗೊಳ್ಳುತ್ತಾರೆ. ಇದರಲ್ಲಿ ಅರ್ಹ ಚಿತ್ರಗಳನ್ನು ವೀಕ್ಷಿಸಬೇಕಾಗುತ್ತದೆ. ಅಂತಿಮ ನಾಮನಿರ್ದೇಶನ ಸುತ್ತಿಗೆ ಎಲ್ಲ 15 ಪಟ್ಟಿ ಮಾಡಲಾದ ಚಿತ್ರಗಳನ್ನು ವೀಕ್ಷಿಸಿಯೇ ಮತ ಚಲಾಯಿಸಬೇಕಾಗುತ್ತದೆ.
ಉತ್ತರ ಭಾರತದ ಗ್ರಾಮವೊಂದರಲ್ಲಿ ಬಾಲ್ಯದ ಸ್ನೇಹಿತರಿಬ್ಬರು ತಮಗೆ ಘನತೆ ಮತ್ತು ಸ್ಥಿರತೆ ನೀಡುವ ವೃತ್ತಿಗಾಗಿ ರಾಷ್ಟ್ರೀಯ ಪೊಲೀಸ್ ಪರೀಕ್ಷೆಗೆ ತಯಾರಾಗುವ ಚಿತ್ರಣವನ್ನು ಹೋಮ್‍ಬೌಂಡ್ ಬಿಂಬಿಸಿದೆ.