ಇಂಡಿಗೊ ಬಿಕ್ಕಟ್ಟು | ಬೆಂಗಳೂರಿನಿಂದ 61 ವಿಮಾನ ಯಾನಗಳು ರದ್ದು
ಇಂಡಿಗೊ ಯಾನ | Photo Credit : PTI
ಹೊಸದಿಲ್ಲಿ,ಡಿ.10: ಕಾರ್ಯಾಚರಣೆಗಳು ಹಳಿಗೆ ಮರಳಿವೆ ಎಂದು ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ ಅವರು ಮಂಗಳವಾರ ಹೇಳಿಕೊಂಡಿದ್ದರೂ ಸತತ 10ನೇ ದಿನವಾದ ಬುಧವಾರವೂ ಇಂಡಿಗೊ ಬಿಕ್ಕಟ್ಟು ಮುಂದುವರಿದಿದೆ.
ಇಂದು ಸಹ ಇಂಡಿಗೊ ಯಾನಗಳು ರದ್ದುಗೊಂಡಿದ್ದು,ಬೆಂಗಳೂರು ಮತ್ತು ಅಹ್ಮದಾಬಾದ್ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಹಲವಾರು ಪ್ರಯಾಣಿಕರು ಅತಂತ್ರರಾಗಿದ್ದರು.
ಇಂಡಿಗೊ ಬುಧವಾರ ಬೆಂಗಳೂರಿನಲ್ಲಿ 35 ಆಗಮನಗಳು ಮತ್ತು 26 ನಿರ್ಗಮನಗಳು ಸೇರಿದಂತೆ 61 ವಿಮಾನ ಯಾನಗಳನ್ನು ರದ್ದುಗೊಳಿಸಿದೆ.
ವರದಿಗಳ ಪ್ರಕಾರ ಇಂಡಿಗೊ ಅಹ್ಮದಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸಬೇಕಿದ್ದ 10 ಯಾನಗಳನ್ನೂ ರದ್ದುಗೊಳಿಸಿದೆ.
ಮಂಗಳವಾರ ಸರಕಾರವು ತನ್ನ ವಿಮಾನಯಾನಗಳ ಸಂಖ್ಯೆಯನ್ನು ಶೇ.10ರಷ್ಟು ಕಡಿತಗೊಳಿಸುವಂತೆ ಇಂಡಿಗೊ ಸಂಸ್ಥೆಗೆ ಆದೇಶಿತ್ತು. ವ್ಯತ್ಯಯಗಳು ಮುಂದುವರಿದಿರುವುದರಿಂದ ವಾಯುಯಾನ ಸಂಸ್ಥೆಯ ಕಾರ್ಯಾಚರಣೆಗಳಲ್ಲಿ ಸ್ಥಿರತೆಯನ್ನು ತರುವುದು ಈ ಕ್ರಮದ ಉದ್ದೇಶವಾಗಿದೆ ಎಂದು ನಾಗರಿಕ ವಾಯುಯಾನ ಸಚಿವ ಕೆ.ರಾಮಮೋಹನ ನಾಯ್ಡು ಹೇಳಿದ್ದರು.