ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಬಿಜೆಪಿಗೆ? : ಆಧಾರರಹಿತ ವದಂತಿ ಎಂದ ಅವರ ಕಚೇರಿ
Photo : PTI
ಹೊಸದಿಲ್ಲಿ: ಕಾಂಗ್ರೆಸ್ ಸಂಸದ ಮನೀಷ ತಿವಾರಿಯವರು ಬಿಜೆಪಿಗೆ ಸೇರಲಿದ್ದಾರೆ ಎಂಬ ವದಂತಿಗಳು ಆಧಾರರಹಿತವಾಗಿವೆ ಎಂದು ಅವರ ಕಚೇರಿಯು ರವಿವಾರ ಸ್ಪಷ್ಟಪಡಿಸಿದೆ ಎಂದು indiatoday.in ವರದಿ ಮಾಡಿದೆ.
ತಿವಾರಿ ಬಿಜೆಪಿ ಸಂಪರ್ಕದಲ್ಲಿದ್ದಾರೆ ಮತ್ತು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಂಜಾಬಿನ ಲುಧಿಯಾನಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸಲು ಉದ್ದೇಶಿಸಿದ್ದಾರೆ ಎಂದು ಮೂಲಗಳು ಈ ಮೊದಲು ಹೇಳಿದ್ದವು.
ತಿವಾರಿ ಬಿಜೆಪಿಗೆ ಸೇರಲಿದ್ದಾರೆ ಎಂಬ ವದಂತಿಯು ಆಧಾರರಹಿತವಾಗಿದೆ. ಅವರು ತನ್ನ ಕ್ಷೇತ್ರದಲ್ಲಿದ್ದಾರೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ. ಶನಿವಾರ ರಾತ್ರಿ ಅವರು ಕಾಂಗ್ರೆಸ್ ಕಾರ್ಯಕರ್ತರೋರ್ವರ ಮನೆಯಲ್ಲಿ ತಂಗಿದ್ದರು ಎಂದು ಅವರ ಕಚೇರಿಯು ತಿಳಿಸಿದೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರು ತನ್ನ ಪುತ್ರ ಹಾಗೂ ಛಿಂದ್ವಾರಾದ ಕಾಂಗ್ರೆಸ್ ಸಂಸದ ನಕುಲನಾಥ ಮತ್ತು ಇತರ ಸಂಸದರೊಂದಿಗೆ ಬಿಜೆಪಿ ಸೇರಬಹುದು ಎಂಬ ವದಂತಿಗಳು ದಟ್ಟಗೊಂಡಿರುವ ನಡುವೆಯೇ ಬಿಜೆಪಿಗೆ ತಿವಾರಿ ಸೇರ್ಪಡೆಯ ಊಹಾಪೋಹಗಳು ಹರಿದಾಡುತ್ತಿವೆ.