×
Ad

ನೆತನ್ಯಾಹು ಭಾರತ ಭೇಟಿ ಮುಂದೂಡಿಕೆ ವರದಿ| ಭಾರತದಲ್ಲಿ ಭದ್ರತೆಯ ಬಗ್ಗೆ ಯಾವುದೇ ಸಂಶಯವಿಲ್ಲ ಎಂದ ಇಸ್ರೇಲ್‌ ಪ್ರಧಾನಿ ಕಚೇರಿ

Update: 2025-11-26 14:44 IST

File Photo: PTI

ಟೆಲ್ ಅವೀವ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿಗದಿತ ಭಾರತ ಭೇಟಿ ಮುಂದೂಡಿಕೆಯಾಗಿದ್ದು, ಇದರ ಬೆನ್ನಿಗೇ, “ಭಾರತದಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ನಮಗೆ ಸಂಪೂರ್ಣ ನಂಬಿಕೆ ಇದೆ” ಎಂದು ಮಂಗಳವಾರ ನೆತನ್ಯಾಹು ಅವರ ಕಾರ್ಯಾಲಯ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ಹೇಳಿದೆ.

ಇದಕ್ಕೂ ಮುನ್ನ, ಭಾರತದಲ್ಲಿನ ಭದ್ರತಾ ಕಳವಳದಿಂದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿಗದಿತ ಭಾರತ ಭೇಟಿ ಮುಂದೂಡಿಕೆಯಾಗಿದೆ ಎಂಬ ಊಹಾಪೋಹಗಳು ಹರಡಿದ್ದವು.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಾರ್ಯಾಲಯ, “ಭಾರತದೊಂದಿಗೆ ಇಸ್ರೇಲ್ ಸಂಬಂಧ ಹಾಗೂ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಬಾಂಧವ್ಯ ತುಂಬಾ ಬಲಿಷ್ಠವಾಗಿದೆ. ಪ್ರಧಾನಿ ಮೋದಿಯಡಿಯ ಭಾರತದ ಭದ್ರತಾ ವ್ಯವಸ್ಥೆ ಬಗ್ಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ತುಂಬಾ ವಿಶ್ವಾಸ ಹೊಂದಿದ್ದಾರೆ. ನಮ್ಮ ತಂಡಗಳು ಹೊಸ ಭೇಟಿಯ ದಿನಾಂಕದ ಕುರಿತು ಸಮಾಲೋಚನೆ ನಡೆಸುತ್ತಿವೆ” ಎಂದು ಸ್ಪಷ್ಟಪಡಿಸಿದೆ.

2018ರ ನಂತರ ಇದೇ ಪ್ರಥಮ ಬಾರಿಗೆ ಡಿಸೆಂಬರ್ ತಿಂಗಳಲ್ಲಿ ಭಾರತ ಭೇಟಿ ನೀಡಬೇಕಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ದಿಲ್ಲಿಯಲ್ಲಿ ಭಯೋತ್ಪಾದಕ ದಾಳಿ ನಡೆದ ಹಿನ್ನೆಲೆಯಲ್ಲಿ ಭಾರತದಲ್ಲಿನ ಭದ್ರತಾ ವ್ಯವಸ್ಥೆ ಬಗೆಗಿನ ಕಳವಳದಿಂದ ತಮ್ಮ ಭಾರತ ಭೇಟಿಯನ್ನು ಮುಂದೂಡಿದ್ದಾರೆ ಎಂದು ಇಸ್ರೇಲ್ ನ ಮಾಧ್ಯಮಗಳು ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಕಾರ್ಯಾಲಯದಿಂದ ಈ ಸ್ಪಷ್ಟನೆ ಹೊರ ಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News