ಜಾದವಪುರ ವಿವಿ ವಿದ್ಯಾರ್ಥಿ ಸಾವಿಗೆ ರ‍್ಯಾಗಿಂಗ್ ಕಾರಣ; ಪೊಲೀಸರ ಶಂಕೆ
ಸ್ವಪನ್ದೀಪ್ ಸಿಂಗ್ ಕುಂಡೂ (Photo: indiatoday.in), ಜಾದವಪುರ ವಿಶ್ವವಿದ್ಯಾನಿಲ (Photo: PTI)
ಕೋಲ್ಕತಾ: ಪಶ್ಚಿಮ ಬಂಗಾಳದ ಜಾದವಪುರ ವಿಶ್ವವಿದ್ಯಾನಿಲಯದ 18 ವರ್ಷ ವಯಸ್ಸಿನ ವಿದ್ಯಾರ್ಥಿ ಸ್ವಪನ್ದೀಪ್ ಸಿಂಗ್ ಕುಂಡೂ ಅವರು ಹಾಸ್ಟೆಲ್ ಕಟ್ಟಡದ ಎರಡನೇ ಅಂತಸ್ತಿನಿಂದ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅದೇ ವಿವಿಯ ಹಳೆ ವಿದ್ಯಾರ್ಥಿ ಸೌರಭ್ ಚೌಧುರಿಯನ್ನು ಶನಿವಾರ ಬಂಧಿಸಿದ್ದಾರೆ. ಹಾಸ್ಟೆಲ್ ಕಟ್ಟಡದಿಂದ ಕೆಳಗೆ ಬೀಳುವ ಮುನ್ನ ಸ್ವಪನ್ದೀಪ್ ತನ್ನ ಸಹಪಾಠಿಗಳೊಂದಿಗೆ ತಾನು ‘ಸಲಿಂಗಕಾಮಿಯಲ್ಲ’ ಎಂದು ಪದೇ ಪದೇ ಹೇಳಿಕೊಂಡಿದ್ದನೆನ್ನಲಾಗಿದೆ.
ಹಾಸ್ಟೆಲ್ ನ ಬಾಲ್ಕನಿಯಿಂದ ಕೆಳಗೆ ಬಿದ್ದ ಸ್ವಪನ್ದೀಪ್ ನ ಮೃತದೇಹವು ನಗ್ನ ಸ್ಥಿತಿಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸ್ವಪನ್ದೀಪ್ನ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕೋಲ್ಕತಾ ಪೊಲೀಸರು ಜಬಲ್ಪುರ ವಿವಿಯ ಮಾಜಿ ವಿದ್ಯಾರ್ಥಿ ಸೌರಬ್ ಚೌಧುರಿಯನ್ನು ಬಂಧಿಸಿದ್ದಾರೆ. ಆರೋಪಿಯು 2022ರಲ್ಲಿ ಜಾದವಪುರ ವಿವಿಯಲ್ಲಿ ಗಣಿತದಲ್ಲಿ ಎಂಎಸ್ಸಿ ಪದವಿ ಪಡೆದಿದ್ದನು. ಆದರೆ ಕ್ಯಾಂಪಸ್ ನ ಹಾಸ್ಟೆಲ್ನಲ್ಲಿ ತನ್ನ ವಾಸ್ತವ್ಯವನ್ನು ಆತ ಮುಂದುವರಿಸಿದ್ದನು.
ಸ್ವಪನ್ದೀಪ್ನ ಸಾವಿಗೆ ರ್ಯಾಗಿಂಗ್ ಕಾರಣವೆಂದು ಸೌರಭ್ ಹೇಳಿದ್ದಾನೆ. ಆತನ ರ್ಯಾಗಿಂಗ್ ನಲ್ಲಿ ತಾನೂ ಶಾಮೀಲಾಗಿರುವುದನ್ನು ಸ್ವಪನ್ದೀಪ್ ಒಪ್ಪಿಕೊಂಡಿದ್ದಾನೆ. ಸೌರಭ್ ತಪ್ಪೊಪ್ಪಿಕೊಂಡ ಬೆನ್ನಲ್ಲೇ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಚೌಧುರಿ ವಿರುದ್ಧ ಪೊಲೀಸರು ಭಾರತೀಯ ದಂಡಸಂಹಿತೆಯ ಸೆಕ್ಷನ್ 302/34ರಡಿ ಆರೋಪಗಳನ್ನು ಹೊರಿಸಿದ್ದು, ಶನಿವಾರ ಅವರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯವರಾದ ಸ್ವಪನ್ದೀಪ್ ಕುಂಡು ಬುಧವಾರ ಮಧ್ಯರಾತ್ರಿ ಹಾಸ್ಟೆಲ್ ಕಟ್ಟಡದ ಎರಡನೆ ಮಹಡಿಯಿದ ಬಿದ್ದು ಸಾವನ್ನಪ್ಪಿದ್ದರು. ಆತ ಜಾಧವಪುರ ವಿವಿಯ ಮುಖ್ಯ ಹಾಸ್ಟೆಲ್ನ ದ್ವಿತೀಯ ಅಂತಸ್ತಿನ ಕೊಠಡಿ ಸಂಖ್ಯೆ 68ರಲ್ಲಿ ವಾಸ್ತವ್ಯವಾಗಿದ್ದರು.
ಗಟ್ಟಿಯಾದ ಸದ್ದೊಂದು ಕೇಳಿಬಂದಾಗ ಹೊರಬಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ, ಸ್ವಪನ್ದೀಪ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡರು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಸ್ವಪನ್ದೀಪ್ ಗುರುವಾರ ನಸುಕಿನಲ್ಲಿ 4;30ರ ವೇಳೆಗೆ ಕೊನೆಯುಸಿರೆಳೆದಿದ್ದರು.
ತನ್ನ ಪುತ್ರನ ಸಾವಿಗೆ ಹಾಸ್ಟೆಲ್ನ ಕೆಲವು ವಿದ್ಯಾರ್ಥಿಗಳು ಹೊಣೆಗಾರರೆಂದು ಮೃತ ವಿದ್ಯಾರ್ಥಿಯ ತಂದೆ ರಾಮ್ಪ್ರಸಾದ್ ಕುಂಡೂ ಹೇಳಿದ್ದಾರೆ.
ಕೆಲವು ವಿದ್ಯಾರ್ಥಿಗಳು ತನ್ನ ಪುತ್ರನ ಮೇಲೆ ಬರ್ಬರ ಹಲ್ಲೆ ನಡೆಸಿದ್ದಾರೆ. ತನಗೆ ಹಾಸ್ಟೆಲ್ ಹಿತವೆನಿಸುವುದಿಲ್ಲವೆಂದು ಸ್ವಪನ್ದೀಪ್ ಪದೇ ಪದೇ ತನ್ನಲ್ಲಿ ಹೇಳುತ್ತಿದ್ದ. ನಾವು ಆತನ ಮಾತನ್ನು ಕೇಳುತ್ತಿದ್ದಲ್ಲಿ ಆತ ಈಗಲೂ ಬದುಕಿರುತ್ತಿದ್ದ ಎಂದು ರಾಮಪ್ರಸಾದ್ ಹೇಳಿದ್ದಾರೆ.