ಜೆಎನ್‌ಯು ಚುನಾವಣೆಯಲ್ಲಿ ಎಡ ಒಕ್ಕೂಟ ಕ್ಲೀನ್ ಸ್ವೀಪ್
ಮತ್ತೆ ಕೆಂಪು ಬಣ್ಣಕ್ಕೆ ತಿರುಗಿದ ಕ್ಯಾಂಪಸ್
Photo Credit : NDTV
ಹೊಸದಿಲ್ಲಿ, ನ.6: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಒಕ್ಕೂಟದ ಚುನಾವಣೆ ಫಲಿತಾಂಶಗಳು ಗುರುವಾರ ಪ್ರಕಟವಾಗಿದ್ದು, ಎಡ ಒಕ್ಕೂಟವು ನಾಲ್ಕೂ ಪ್ರಮುಖ ಹುದ್ದೆಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಆರೆಸ್ಸೆಸ್ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಗೆ ಈ ಬಾರಿ ಸೋಲೊಪ್ಪಿಕೊಂಡಿದೆ.
ಅಖಿಲ ಭಾರತ ವಿದ್ಯಾರ್ಥಿಗಳ ಅಸೋಸಿಯೇಷನ್ (ಎಐಎಸ್‌ಎ), ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಹಾಗೂ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಷನ್ (ಡಿಎಸ್‌ಎಫ್) ಸೇರಿ ರಚಿಸಲಾದ ಎಡ ಒಕ್ಕೂಟವು ಈ ಬಾರಿ ಕ್ಯಾಂಪಸ್‌ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದೆ.
ಎಐಎಸ್‌ಎ ಅಭ್ಯರ್ಥಿ ಅದಿತಿ ಮಿಶ್ರಾ ಅವರು ಎಬಿವಿಪಿಯ ವಿಕಾಸ್ ಪಟೇಲ್ ಅವರನ್ನು 449 ಮತಗಳ ಅಂತರದಿಂದ ಸೋಲಿಸಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆಯಾಗಿ ಕಿಜಾಕೂಟ್ ಗೋಪಿಕಾ ಬಾಬು, ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್ ಯಾದವ್, ಹಾಗೂ ಜಂಟಿ ಕಾರ್ಯದರ್ಶಿಯಾಗಿ ದಾನಿಶ್ ಅಲಿ ಆಯ್ಕೆಯಾಗಿದ್ದಾರೆ.
ಒಟ್ಟು 9,043 ಮತದಾರರಲ್ಲಿ ಶೇ.67ರಷ್ಟು ಮಂದಿ ಮತ ಚಲಾಯಿಸಿದ್ದರು. ಎನ್‌ಎಸ್‌ಯುಐ, ಬಿಎಪಿಎಸ್‌ಎ ಹಾಗೂ ಸ್ವತಂತ್ರ ಅಭ್ಯರ್ಥಿಗಳೂ ಈ ಬಾರಿ ಕಣದಲ್ಲಿದ್ದರು.
ಎಡ ಒಕ್ಕೂಟದ ಪ್ರಬಲ ಪ್ರಚಾರ, ವಿದ್ಯಾರ್ಥಿ ಹಕ್ಕುಗಳ ಕುರಿತ ಘೋಷಣೆಗಳು ಹಾಗೂ ಕ್ಯಾಂಪಸ್‌ನಲ್ಲಿ ನಡೆದ ಚರ್ಚೆಗಳು ಚುನಾವಣಾ ಹೋರಾಟಕ್ಕೆ ಮೆರುಗು ನೀಡಿತ್ತು. ಫಲಿತಾಂಶ ಪ್ರಕಟವಾದ ಬಳಿಕ ಎಡ ಒಕ್ಕೂಟದ ವಿದ್ಯಾರ್ಥಿಗಳು “ಜೆಎನ್‌ಯು ಮತ್ತೆ ಕೆಂಪಾಗಿದೆ” ಎಂದು ಘೋಷಣೆ ಕೂಗಿದರು.