ಕಳಮಶ್ಶೇರಿ ಬಾಂಬ್ ಸ್ಫೋಟ ಪ್ರಕರಣ: ಮೃತರ ಸಂಖ್ಯೆ 5ಕ್ಕೇರಿಕೆ
Photo- PTI
ಕೊಚ್ಚಿ: ಕಳಮಶ್ಶೇರಿಯ ಯೆಹೋವನ ಸಾಕ್ಷಿಗಳ ಸಮಾವೇಶದಲ್ಲಿ ಇತ್ತೀಚಿಗೆ ಸಂಭವಿಸಿದ ಐಇಡಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಶನಿವಾರ 5ಕ್ಕೆ ಏರಿಕೆಯಾಗಿದೆ.
ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಧ್ಯವಯಸ್ಸಿನ ಮಹಿಳೆಯೋರ್ವರು ಶನಿವಾರ ಮೃತಪಟ್ಟಿದ್ದಾರೆ. ಮೃತಪಟ್ಟ ಮಹಿಳೆಯನ್ನು ಎರ್ನಾಕುಳಂ ಜಿಲ್ಲೆಯ ಮಲಯಟ್ಟೂರಿನ 45ರ ಹರೆಯದ ಸಾಲ್ಲಿ ಪ್ರದೀಪನ್ ಎಂದು ಗುರುತಿಸಲಾಗಿದೆ. ಅವರು ಶನಿವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಸರಕಾರದ ಬುಲೆಟಿನ್ ತಿಳಿಸಿದೆ.
ಅವರು ಇದುವರೆಗೆ ವೆಂಟಿಲೇಟರ್ನ ನೆರವಿನಿಂದ ಉಸಿರಾಡುತ್ತಿದ್ದರು. ಸಾಲ್ಲಿ ಅವರು ಇದೇ ಘಟನೆಯ ಬಳಿಕ ಅ.30ರಂದು ಮೃತಪಟ್ಟ 12 ವರ್ಷದ ಲಿಬಿನಾ ಅವರ ತಾಯಿ. ಸ್ಫೋಟದಿಂದ ಸಾಲ್ಲಿಗೆ ಶೇ. 50 ಸುಟ್ಟ ಗಾಯಗಳಾಗಿತ್ತು ಎಂದು ಅದು ತಿಳಿಸಿದೆ.
ಬಾಂಬ್ ಸ್ಫೋಟದಲ್ಲಿ ಗಾಯಗೊಂಡವರಲ್ಲಿ ಪ್ರಸಕ್ತ 17 ಮಂದಿ ಇಲ್ಲಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 8 ಮಂದಿ ತುರ್ತು ನಿಗಾ ಘಟಕದಲ್ಲಿ ಇದ್ದಾರೆ. ಓರ್ವರ ಸ್ಥಿತಿ ಚಿಂತಾಜನಕವಾಗಿದೆ. ಉಳಿದವರು ವಾರ್ಡಿನಲ್ಲಿ ಇದ್ದಾರೆ ಎಂದು ಬುಲೆಟಿನ್ ತಿಳಿಸಿದೆ.
ಯೆಹೂವನ ಸಾಕ್ಷಿಗಳು ಎಂದು ಕರೆಯಲಾಗುವ ಕ್ರೈಸ್ತರ ಪಂಥವೊಂದು ಅ.29ರಂದು ಆಯೋಜಿಸಿದ್ದ ಸಮಾವೇಶದಲ್ಲಿ ಈ ಸ್ಫೋಟ ಸಂಭವಿಸಿತ್ತು. ಸಮಾವೇಶದ ಭಾಗವಾಗಿದ್ದ ಇಬ್ಬರು ಮಹಿಳೆಯರು ಅದೇ ದಿನ ಮೃತಪಟ್ಟಿದ್ದರು. ಗಾಯಗೊಂಡ ಲಿಬಿನಾ ಅ.30ರಂದು ಕಲಮಶ್ಶೇರಿ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟಿದ್ದರು. ತರುವಾಯ ಕಲಮಶ್ಶೇರಿಯ 61 ವರ್ಷದ ಮೋಲಿ ಜಾಯ್ ಅವರು ಖಾಸಗಿ ಆಸ್ಪತ್ರೆಯಲ್ಲಿ ನ.6ರಂದು ಮೃತಪಟ್ಟಿದ್ದರು. ಸುಮಾರು 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಯೆಹೋವನ ಸಾಕ್ಷಿಗಳ ಮೂರು ದಿನಗಳ ಸಭೆಯ ಅಂತಿಮ ದಿನದಂದು ಈ ಸ್ಫೋಟ ಸಂಭವಿಸಿತ್ತು. ಘಟನೆ ನಡೆದ ಕೆಲವು ನಿಮಿಷಗಳ ಬಳಿಕ ಯೆಹೂವನ ಸಾಕ್ಷಿಗಳ ಪಂಥದ ಸದಸ್ಯ ಡೋಮಿನಿಕ್ ಮಾರ್ಟಿನ್ ತ್ರಿಶೂರ್ ಜಿಲ್ಲೆಯಲ್ಲಿ ಪೊಲೀಸರ ಮುಂದೆ ಶರಣಾಗಿದ್ದ. ಅನಂತರ ಪೊಲೀಸರು ಆತನನ್ನು ಬಂಧಿಸಿದರು.