×
Ad

ಲಡಾಖ್‌ ಗೆ ರಾಜ್ಯದ ಸ್ಥಾನಮಾನ ಆಗ್ರಹಿಸಿ ಕೆಡಿಎ, ಎಲ್‌ಎಬಿ ನೇತೃತ್ವದಲ್ಲಿ ಉಪವಾಸ ಮುಷ್ಕರ ಆರಂಭ

Update: 2025-08-09 20:24 IST

PC : PTI 

ಕಾರ್ಗಿಲ್, ಆ. 9: ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಗೆ ರಾಜ್ಯದ ಸ್ಥಾನಮಾನ ಹಾಗೂ ಅದನ್ನು 6ನೇ ಪರಿಚ್ಛೇದದಲ್ಲಿ ಸೇರ್ಪಡೆ ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಬೆಂಬಲಿಸಿ ಮೂರು ದಿನಗಳ ಉಪವಾಸ ಮುಷ್ಕರ ಶನಿವಾರ ಇಲ್ಲಿ ಆರಂಭವಾಗಿದೆ.

ತಮ್ಮೊಂದಿಗೆ ಮುಂದಿನ ಸುತ್ತಿನ ಮಾತುಕತೆ ನಡೆಸುವಲ್ಲಿ ಕೇಂದ್ರದ ವಿಳಂಬದ ಕುರಿತಂತೆ ಕಾರ್ಗಿಲ್ ಡೆಮಾಕ್ರೆಟಿಕ್ ಅಲಯನ್ಸ್ (ಕೆಡಿಎ) ಹಾಗೂ ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ)ಯ ಅಸಮಾಧಾನದ ನಡುವೆ ಈ ಉಭಯ ಸಂಸ್ಥೆಗಳು ಆಯೋಜಿಸಿದ ಉಪವಾಸ ಮುಷ್ಕರ ನಗರದ ಹುಸ್ಸಾನಿ ಪಾರ್ಕ್‌ ನಲ್ಲಿ ನಡೆದಿದೆ.

ಕೆಡಿಎ ಹಾಗೂ ಎಲ್‌ಎಬಿ ಕಳೆದ ಐದು ವರ್ಷಗಳಿಂದ ಈ ಚಳವಳಿಯನ್ನು ಜಂಟಿಯಾಗಿ ಮುನ್ನಡೆಸುತ್ತಿವೆ ಹಾಗೂ ಗೃಹ ವ್ಯವಹಾರಗಳ ಸಚಿವಾಲಯದ ಉನ್ನತಾಧಿಕಾರ ಸಮಿತಿ (ಎಚ್‌ಪಿಸಿ)ಯೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದೆ.

‘‘ನಾವು ಸಂಘಟಿತರಾಗಿ ಲಡಾಖ್ ಅನ್ನು ಲಡಾಖ್ ಆಳುವ ಭವಿಷ್ಯವನ್ನು ನಿರ್ಮಿಸಬಹುದು. ಲಡಾಖ್‌ ಗೆ ರಾಜ್ಯದ ಸ್ಥಾನಮಾನ, ಲಡಾಖ್ ಅನ್ನು ಸಂವಿಧಾನದ 6ನೇ ಪರಿಚ್ಛೇದದ ಅಡಿಯಲ್ಲಿ ಸೇರ್ಪಡೆ, ಲೇಹ್ ಹಾಗೂ ಕಾರ್ಗಿಲ್ ವಲಯಗಳಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರಗಳು ಹಾಗೂ ಲೋಕಸೇವಾ ಆಯೋಗ (ಪಿಎಸ್‌ಸಿ) ಸ್ಥಾಪನೆ ಆಗ್ರಹಿಸಿ ಮೂರು ದಿನಗಳ ಉಪವಾಸ ಮುಷ್ಕರ’’ ಎಂದು ಬರೆದ ಬ್ಯಾನರ್ ಅನ್ನು ಉಪವಾಸ ಮುಷ್ಕರ ನಡೆಸುತ್ತಿರುವ ಸ್ಥಳದಲ್ಲಿ ಕೆಡಿಎ ಹಾಗೂ ಎಲ್‌ಎಬಿ ಜಂಟಿಯಾಗಿ ಹಾಕಿದೆ.

‘‘ಇಂದು ನಡೆಯುತ್ತಿರುವ ಉಪವಾಸ ಮುಷ್ಕರ ನಮ್ಮ ನಾಲ್ಕು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಚಳವಳಿಯ ಭಾಗವಾಗಿದೆ. ಈ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ನಾಲ್ಕು ವರ್ಷಗಳಲ್ಲಿ ಮುಷ್ಕರ, ಉಪವಾಸ, ಪ್ರತಿಭಟನೆ ಹಾಗೂ ಪಾದಯಾತ್ರೆಗಳನ್ನು ನಡೆಸಿದ್ದೇವೆ. ಕೆಲವು ಬೇಡಿಕೆಗಳ ಈಡೇರಿಕೆ ಕುರಿತಂತೆ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಿದ್ದೇವೆ. ಆದರೆ, ಕೆಲವು ಬೇಡಿಕೆಗಳ ಕುರಿತು ಇನ್ನಷ್ಟೇ ಮಾತುಕತೆ ನಡೆಸಬೇಕಾಗಿದೆ. ಇದರಲ್ಲಿ ನಮ್ಮ ಮೂಲಭೂತ ಬೇಡಿಕೆಯಾದ ರಾಜ್ಯದ ಸ್ಥಾನಮಾನ ಹಾಗೂ 6ನೇ ಪರಿಚ್ಛೇದದಲ್ಲಿ ಸೇರ್ಪಡೆಯ ಬೇಡಿಕೆ ಕೂಡ ಸೇರಿದೆ’’ ಎಂದು ಕೆಡಿಎಯ ಅಧ್ಯಕ್ಷ ಅಸ್ಗರ್ ಅಲಿ ಕರ್ಬಲಾಯಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News