ಕೊಲ್ಕತ್ತಾ ಅತ್ಯಾಚಾರ ಪ್ರಕರಣಕ್ಕೆ ತಿರುವು: ಪೊಲೀಸರ ವಿರುದ್ಧವೇ ಗಂಭೀರ ಆರೋಪ ಮಾಡಿದ ಸಂತ್ರಸ್ತೆಯ ತಂದೆ
PC | timesofindia
ಕೊಲ್ಕತ್ತಾ: ದೇಶದ ಅತ್ಯುನ್ನತ ವ್ಯವಸ್ಥಾಪನಾ ಸಂಸ್ಥೆಯ ವಿದ್ಯಾರ್ಥಿಯೊರ್ವ ತನ್ನ ಮೇಲೆ ಹಾಸ್ಟೆಲ್ ಕೊಠಡಿಯಲ್ಲಿ ಅತ್ಯಾಚಾರ ಎಸಗಿದ್ದಾಗಿ ಮನಃಶಾಸ್ತ್ರಜ್ಞೆಯೊಬ್ಬರು ಆರೋಪಿಸಿದ್ದರು. ಪ್ರಕರಣ ಇದೀಗ ವಿಭಿನ್ನ ತಿರುವನ್ನು ಪಡೆದುಕೊಂಡಿದೆ.
ಈ ಪ್ರಕರಣದಲ್ಲಿ ಯಾವುದೇ ಅಪರಾಧ ಕೃತ್ಯ ನಡೆದಿಲ್ಲ. ಪೊಲೀಸರೇ ಬಲವಂತಪಡಿಸಿ ಪ್ರಕರಣ ದಾಖಲಿಸುವಂತೆ ಮಾಡಿದ್ದಾರೆ ಎಂದು ಸಂತ್ರಸ್ತೆಯ ತಂದೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಶನಿವಾರ ಕೊಲ್ಕತ್ತಾದ ಉನ್ನತ ಸಂಸ್ಥೆಯ ಹಾಸ್ಟೆಲ್ ನಿಂದ ಎರಡನೇ ವರ್ಷದ ವಿದ್ಯಾರ್ಥಿ ಪರಮಾನಂದ ಟೋಪಣ್ಣವರ್ ಎಂಬಾತನನ್ನು ಬಂಧಿಸಲಾಗಿತ್ತು. ಅತ್ಯಾಚಾರ ಸೇರಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಿಸಿ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಯನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ಮಹಿಳೆ ಮೊದಲು ಆನ್ ಲೈನ್ ನಲ್ಲಿ ಟೋಪಣ್ಣವರ್ ಎಂಬಾತನನ್ನು ಸಂಪರ್ಕಿಸಿದ್ದರು. ವೈಯಕ್ತಿಕ ಕೌನ್ಸಿಲಿಂಗ್ ಗಾಗಿ ಮಹಿಳೆಯನ್ನು ಹಾಸ್ಟೆಲ್ ಕೊಠಡಿಗೆ ಕರೆದೊಯ್ದ ಟೋಪಣ್ಣವರ್ ಫಿಝ್ಝಾ ಮತ್ತು ಪಾನೀಯ ನೀಡಿದ್ದಾಗಿ ದೂರಲಾಗಿತ್ತು. ವಿದ್ಯಾರ್ಥಿ ತನ್ನನ್ನು ಅಸಭ್ಯವಾಗಿ ಸ್ಪರ್ಶಿಸಿದ್ದು ನೆನಪಿಗೆ ಬರುತ್ತಿದೆ. ಆತ ನನ್ನ ಮೇಲೆ ಅತ್ಯಾಚಾರ ಎಸಗಿದ್ದ. ನನಗೆ ಪ್ರಜ್ಞೆ ಬಂದಾಗ ಆತನ ಬೆಡ್ ಮೇಲೆ ನಾನಿದ್ದೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.
ಆದರೆ ಮಹಿಳೆಯ ತಂದೆ ಈ ಆರೋಪದ ಬಗ್ಗೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ನನ್ನ ಮಗಳು ಕರೆ ಮಾಡಿ ಆಟೊರಿಕ್ಷಾದಿಂದ ಬಿದ್ದಿರುವುದಾಗಿ ನನಗೆ ಹೇಳಿದ್ದಾಳೆ. ಆದರೆ, ಆಕೆಗೆ ಕಿರಕುಳ ನೀಡಲಾಗಿದೆ, ಈ ಸಂಬಂಧ ಕೆಲವರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದರು. ಇಂತಹ ಯಾವುದೇ ಕೃತ್ಯ ನಡೆದಿಲ್ಲ ಎಂದು ಮಹಿಳೆಯ ತಂದೆ ಹೇಳಿದ್ದಾರೆ.