ಲಡಾಖ್‌ಗೆ ರಾಜ್ಯದ ಸ್ಥಾನಮಾನ ಆಗ್ರಹಿಸಿ ಮತ್ತೆ ಉಪವಾಸ ಮುಷ್ಕರ; ಸೋನಮ್ ವಾಗ್ಚುಕ್, ಲೇಹ್ ಅಪೆಕ್ಸ್ ಬಾಡಿ ನಿರ್ಧಾರ
Photo | X @SajjadKargili_
ಹೊಸದಿಲ್ಲಿ, ಸೆ. 10: ಲಡಾಕ್ ಅನ್ನು ಸಂವಿಧಾನದ ಆರನೇ ಪರಿಚ್ಛೇದದಲ್ಲಿ ಸೇರಿಸಬೇಕೆಂಬ ಹಾಗೂ ರಾಜ್ಯದ ಸ್ಥಾನಮಾನ ನೀಡಬೇಕೆಂಬ ತಮ್ಮ ಬೇಡಿಕೆಯ ಈಡೇರಿಕೆಗಾಗಿ 35 ದಿನಗಳ ಉಪವಾಸ ಮುಷ್ಕರ ನಡೆಸಲಾಗುವುದು ಎಂದು ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಹಾಗೂ ಲೇಹ್ ಅಪೆಕ್ಸ್ ಬಾಡಿ ಬುಧವಾರ ಘೋಷಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಂಗ್ಚುಕ್, ತಮ್ಮ ಬೇಡಿಕೆ ಕುರಿತು ಮಾತುಕತೆ ನಡೆಸಲು ಕೇಂದ್ರ ಗೃಹ ಸಚಿವಾಲಯ ಕಳೆದ ಎರಡು ತಿಂಗಳಿಂದ ಸಭೆ ಕರೆದಿಲ್ಲ. ಆದುದರಿಂದ ಬುಧವಾರದಿಂದ ಇನ್ನೊಂದು ಉಪವಾಸ ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಕೇಂದ್ರ ಸರಕಾರ ತಮ್ಮ ಬೇಡಿಕೆಯನ್ನು ಈಡೇರಿಸದ ಕಾರಣ ಲಡಾಖ್ ಗೆ ಸಂವಿಧಾನ 6ನೇ ಪರಿಚ್ಛೇದದ ಅಡಿಯಲ್ಲಿ ರಕ್ಷಣೆ ಹಾಗೂ ರಾಜ್ಯದ ಸ್ಥಾನಮಾನವನ್ನು ಆಗ್ರಹಿಸುವ ಚಳುವಳಿಯನ್ನು ತೀವ್ರಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.
‘‘ಕೇಂದ್ರ ಸರಕಾರದೊಂದಿಗಿನ ಮಾತುಕತೆ ಸುಮಾರು ಎರಡು ತಿಂಗಳಿಂದ ಸ್ಥಗಿತಗೊಂಡಿದೆ. ಪ್ರಧಾನ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಯುವ ಹಂತಕ್ಕೆ ಮಾತುಕತೆ ತಲುಪಿತ್ತು. ಆದರೆ, ಸರಕಾರ ಇನ್ನೊಂದು ಸಭೆ ಕರೆಯಲಿಲ್ಲ’’ ಎಂದು ಅವರು ಹೇಳಿದ್ದಾರೆ.
ಲೇಹ್ ನ ಗುಡ್ಡಗಾಡು ಮಂಡಳಿ ಚುನಾವಣೆ ಶೀಘ್ರದಲ್ಲಿ ನಡೆಯಲಿದೆ ಎಂದು ವಾಂಗ್ಚುಕ್ ಹೇಳಿದರು. ಕಳೆದ ಗುಡ್ಡಗಾಡು ಮಂಡಳಿ ಚುನಾವಣೆ ಸಂದರ್ಭ ಲಡಾಖ್ ಅನ್ನು ಸಂವಿಧಾನದ 6ನೇ ಪರಿಚ್ಛೇದದಲ್ಲಿ ಸೇರಿಸುವ ಕುರಿತು ಕೇಂದ್ರದ ಆಡಳಿತಾರೂಢ ಬಿಜೆಪಿ ಸರಕಾರ ಭರವಸೆ ನೀಡಿರುವುದನ್ನು ಅವರು ನೆನಪಿಸಿದರು. ಮುಂದಿನ ಚುನಾವಣೆಗೆ ಮುನ್ನ ಭರವಸೆ ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.