ಲಡಾಖ್ | ಲೇಹ್ ಹಿಂಸಾಚಾರ, ಪೋಲಿಸ್ ಕ್ರಮದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ
Photo Credit: ANI
ಲೇಹ್,ಅ.2: ಲಡಾಖ್ ಆಡಳಿತವು ಸೆ.24ರಂದು ಲೇಹ್ ಪಟ್ಟಣದಲ್ಲಿಯ ಬಿಜೆಪಿ ಕಚೇರಿಯ ಹೊರಗೆ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆ ಮತ್ತು ನಾಲ್ವರ ಸಾವಿಗೆ ಕಾರಣವಾದ ಪೋಲಿಸ್ ಕ್ರಮದ ಕುರಿತು ಮ್ಯಾಜಿಸ್ಟೀರಿಯಲ್ ತನಿಖೆಗೆ ಗುರುವಾರ ಆದೇಶಿಸಿದೆ.
ಲಡಾಖ್‌ಗೆ ರಾಜ್ಯ ಸ್ಥಾನಮಾನ ಮತ್ತು ಆರನೇ ಪರಿಚ್ಛೇದಕ್ಕೆ ಸೇರ್ಪಡೆ ಸೇರಿದಂತೆ ದೀರ್ಘಕಾಲದಿಂದ ಬಾಕಿಯುಳಿದಿರುವ ಹಲವಾರು ಬೇಡಿಕೆಗಳ ಕುರಿತು ಮಾತುಕತೆಗಳನ್ನು ನಡೆಸುವಲ್ಲಿ ಕೇಂದ್ರದ ವಿಳಂಬವನ್ನು ವಿರೋಧಿಸಿ ಲೇಹ್ ಅಪೆಕ್ಸ್ ಬಾಡಿ(ಎಲ್‌ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್(ಕೆಡಿಎ) ಕರೆ ನೀಡಿದ್ದ ಉಪವಾಸ ಮುಷ್ಕರದ ಸಂದರ್ಭದಲ್ಲಿ ಲೇಹ್ ಪಟ್ಟಣದ ಬಿಜೆಪಿ ಕಚೇರಿಯ ಹೊರಗೆ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿದ್ದವು.
ವಿಚಾರಣೆಯು ಘರ್ಷಣೆಗಳಿಗೆ ಕಾರಣಗಳನ್ನು ತನಿಖೆ ಮಾಡಲಿದೆ, ಅದಕ್ಕೆ ಹೊಣೆಯಾಗಿದ್ದವರನ್ನು ಗುರುತಿಸಲಿದೆ ಮತ್ತು ಕಾನೂನು ಜಾರಿ ಸಂಸ್ಥೆಗಳು ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಿದ್ದವು ಎನ್ನುವುದನ್ನು ಪರಿಶೀಲಿಸಲಿದೆ. ಪ್ರದೇಶದಲ್ಲಿ ಹೊಗೆಯಾಡುತ್ತಿರುವ ಉದ್ವಿಗ್ನತೆಯ ನಡುವೆ ಉತ್ತರದಾಯಿತ್ವವನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾರ್ವಜನಿಕ ವಿಶ್ವಾಸವನ್ನು ಮರುಸ್ಥಾಪಿಸಲು ತನಿಖೆಯನ್ನು ಕಾಲಮಿತಿಯಲ್ಲಿ ನಡೆಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ತನಿಖಾ ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ತನ್ನ ಆದೇಶದಲ್ಲಿ ತಿಳಿಸಿರುವ ಆಡಳಿತವು, ಘಟನೆಯ ಬಗ್ಗೆ ಮಾಹಿತಿಯನ್ನು ಹೊಂದಿರುವ ವ್ಯಕ್ತಿಗಳು ಅ.4ರಿಂದ 18ರೊಳಗೆ ವಿಚಾರಣಾ ಅಧಿಕಾರಿಗೆ ಸ್ವಯಂಪ್ರೇರಿತವಾಗಿ ಹೇಳಿಕೆ ಅಥವಾ ಪುರಾವೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.
‘ಗಂಭೀರ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ’ ಕುರಿತು ನುಬ್ರಾ ಉಪವಿಭಾಗಾಧಿಕಾರಿ ಮುಕುಲ್ ಬೇನಿವಾಲ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ.
ಸೆ.24ರ ಹಿಂಸಾತ್ಮಕ ಪ್ರತಿಭಟನೆಗಳ ಸಂದರ್ಭದಲ್ಲಿ ಪೋಲಿಸ್ ಕಾರ್ಯಾಚರಣೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಮಾಜಿ ಯೋಧ ಸೇರಿದಂತೆ ನಾಲ್ವರು ನಾಗರಿಕರ ಸಾವುಗಳ ಕುರಿತು ನ್ಯಾಯಾಂಗ ತನಿಖೆಗಾಗಿ ಕೆಡಿಎ ಮತ್ತು ಎಲ್‌ಎಬಿಗಳ ನಿರಂತರ ಆಗ್ರಹದ ಹಿನ್ನೆಲೆಯಲ್ಲಿ ಆಡಳಿತವು ವಿಚಾರಣೆಗೆ ಆದೇಶವನ್ನು ಹೊರಡಿಸಿದೆ.