ಲಡಾಖ್ ಪ್ರತಿಭಟನೆ | ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಗಣಿಸುವ ಅಗತ್ಯವಿದೆ: ಮಾಜಿ ಅಧಿಕಾರಿಗಳು
ಕಾನ್ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್ ನಿಂದ ಬಹಿರಂಗ ಪತ್ರ
Photo Credit: ANI
ಹೊಸದಿಲ್ಲಿ,ಅ.11: ಸಾಂವಿಧಾನಿಕ ಸುರಕ್ಷತೆಗಾಗಿ ಒತ್ತಾಯಿಸಿ ಸೆ.14ರಂದು ಲೇಹ್ನಲ್ಲಿ ನಡೆದಿದ್ದ ಪ್ರತಿಭಟನೆಗಳಿಗೆ ಕೇಂದ್ರ ಸರಕಾರದ ಪ್ರತಿಕ್ರಿಯೆಯನ್ನು ಟೀಕಿಸಿರುವ 113 ನಿವೃತ್ತ ಸರಕಾರಿ ನೌಕರರು ಮತ್ತು ರಾಜತಾಂತ್ರಿಕರು, ಬೇಡಿಕೆಗಳು ನ್ಯಾಯಸಮ್ಮತವಾಗಿವೆ ಮತ್ತು ಅವುಗಳನ್ನು ಸಹಾನುಭೂತಿಯಿಂದ ಪರಿಗಣಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಸಿಎಎ ವಿರುದ್ಧ ಪ್ರತಿಭಟನೆಗಳು, ರೈತರ ಪ್ರತಿಭಟನೆ ಮತ್ತು ಮಣಿಪುರದ ಜನಾಂಗೀಯ ಸಂಘರ್ಷಗಳು ಸೇರಿದಂತೆ ದೇಶದಲ್ಲಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ಪದೇ ಪದೇ ಅಸಮಂಜಸ ನಿಲುವನ್ನು ತಳೆದಿದೆ ಎಂದು ಕಾನ್ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್(ಸಿಸಿಜಿ) ಶನಿವಾರ ಬಹಿರಂಗ ಪತ್ರದಲ್ಲಿ ಹೇಳಿದೆ.
ಒಂದು ನಿರ್ದಿಷ್ಟ ವಿಷಯದ ಬಗ್ಗೆ ಅಷ್ಟೊಂದು ಜನರು ಏಕೆ ಪ್ರತಿಭಟಿಸುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸುವ ಬದಲು, ಪ್ರತಿಭಟನಾಕಾರರ ಅಹವಾಲುಗಳನ್ನು ತಾಳ್ಮೆಯಿಂದ ಮತ್ತು ಮುಕ್ತ ಮನಸ್ಸಿನಿಂದ ಆಲಿಸುವ ಬದಲು ಸರಕಾರದ ಪ್ರತಿಕ್ರಿಯೆಯು ಹೆಚ್ಚಾಗಿ ನಕಾರಾತ್ಮಕವಾಗಿದೆ. ಅದು ಸಂಬಂಧಿಸಿದವರೊಂದಿಗೆ ಗಂಭೀರ ಸಮಾಲೋಚನೆಗಳನ್ನು ನಡೆಸುವುದಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ಜನರು ತನ್ನ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದರೆ ಅವರು ತನ್ನ ಶತ್ರುಗಳು ಎಂದು ಸರಕಾರವು ಭಾವಿಸಿರುವಂತಿದೆ. ಇದೇ ಧೋರಣೆಯನ್ನು ಲಡಾಖ್ ನಲ್ಲಿಯೂ ಕಾಣಬಹುದು ಎಂದೂ ಪತ್ರವು ಹೇಳಿದೆ.