ಅ. 22ರಂದು ಕೇಂದ್ರದೊಂದಿಗೆ ಮಾತುಕತೆ: ಲಡಾಖ್ ಅಪೆಕ್ಸ್ ಬಾಡಿ
Photo | ANI
ಲೇಹ್: ಅ.22ರಂದು ಗೃಹ ವ್ಯವಹಾರಗಳ ಸಚಿವಾಲಯದ ಉಪ ಸಮಿತಿಯೊಂದಿಗೆ ಲಡಾಖ್ ಪ್ರತಿನಿಧಿಗಳು ದಿಲ್ಲಿಯಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ರವಿವಾರ ಲೇಹ್ ಅಪೆಕ್ಸ್ ಬಾಡಿಯ ಸಹ ಅಧ್ಯಕ್ಷ ಚೆರಿಂಗ್ ದೊರ್ಜೆ ತಿಳಿಸಿದ್ದಾರೆ.
ಲಡಾಖ್ ಗೆ ರಾಜ್ಯ ಸ್ಥಾನಮಾನ ನೀಡಬೇಕು ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ರಕ್ಷಣೆ ನೀಡಲು ಸಂವಿಧಾನದ ಆರನೆ ಪರಿಚ್ಛೇದದಡಿ ಸೇರ್ಪಡೆ ಮಾಡಬೇಕು ಎಂದು ಈ ಮಾತುಕತೆಯ ವೇಳೆ ಲೇಹ್ ಅಪೆಕ್ಸ್ ಬಾಡಿ ಹಾಗೂ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ನ ಮೂವರು ಪ್ರತಿನಿಧಿಗಳು ಪ್ರಾಥಮಿಕ ಬೇಡಿಕೆ ಮಂಡಿಸುವ ಉದ್ದೇಶ ಹೊಂದಿದ್ದಾರೆ ಎಂದು ಲಾಕ್ರೂಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಅಕ್ಟೋಬರ್ 22ರಂದು ಉಪ ಸಮಿತಿಯ ಸಭೆಯನ್ನು ಆಯೋಜಿಸಲಾಗಿದೆ ಎಂದು ಗೃಹ ಸಚಿವಾಲಯ ನಮಗೆ ಮಾಹಿತಿ ನೀಡಿದ್ದು, ಲೇಹ್ ಅಪೆಕ್ಸ್ ಬಾಡಿ ಹಾಗೂ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ಎರಡನ್ನೂ ಈ ಸಭೆಗೆ ಆಹ್ವಾನಿಸಲಾಗಿದೆ. ನಮ್ಮನ್ನು ಮಾತುಕತೆಗೆ ಆಹ್ವಾನಿಸುವ ಭಾರತ ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ ಹಾಗೂ ಮಾತುಕತೆಯಲ್ಲಿ ಸಕಾರಾತ್ಮಕ ಫಲಿತಾಂಶ ಬರುವುದನ್ನು ಎದುರು ನೋಡುತ್ತಿದ್ದೇವೆ” ಎಂದೂ ಅವರು ಹೇಳಿದ್ದಾರೆ.
ಲಡಾಖ್ ಗೆ ರಾಜ್ಯ ಸ್ಥಾನಮಾನ ನೀಡಬೇಕು ಹಾಗೂ ಲಡಾಖ್ ಅನ್ನು ಸಂವಿಧಾನದ ಆರನೆಯ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆಗಳ ಕುರಿತ ಮಾತುಕತೆಯನ್ನು ಮುಂಚಿತವಾಗಿ ನಡೆಸಬೇಕು ಎಂದು ಆಗ್ರಹಿಸಿ ಲೇಹ್ ಅಪೆಕ್ಸ್ ಬಾಡಿ ಕರೆ ನೀಡಿದ್ದ ಬಂದ್ ವೇಳೆ, ಸೆಪ್ಟೆಂಬರ್ 24ರಂದು ಲೇಹ್ ನಲ್ಲಿ ವ್ಯಾಪಕ ಹಿಂಸಾಚಾರಗಳು ನಡೆದಿದ್ದವು.