×
Ad

ಎರಡು ವರ್ಷಗಳ ಹಿಂದೆ ‘ವಿದೇಶಿ’ ಹಣೆಪಟ್ಟಿಯೊಂದಿಗೆ ನಿಧನರಾಗಿದ್ದ ರಹೀಂ ಅಲಿಯನ್ನು ಈಗ ಭಾರತೀಯ ಪ್ರಜೆ ಎಂದು ಘೋಷಿಸಿದ ಸುಪ್ರೀಂ ಕೋರ್ಟ್!

Update: 2024-07-18 17:58 IST

PC : indianexpress.com

ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು ಕಳೆದ ವಾರ ಮಹತ್ವದ ತೀರ್ಪೊಂದರಲ್ಲಿ ಅಸ್ಸಾಂ ನಿವಾಸಿ ರಹೀಂ ಅಲಿಯವರನ್ನು ಭಾರತೀಯ ಪ್ರಜೆ ಎಂದು ಘೋಷಿಸಿದೆ,ತನ್ಮೂಲಕ ರಾಜ್ಯದ ವಿದೇಶಿಯರ ನ್ಯಾಯಮಂಡಳಿಯು ಅವರನ್ನು ವಿದೇಶಿ ಎಂದು ಘೋಷಿಸುವುದರೊಂದಿಗೆ ಆರಂಭಗೊಂಡಿದ್ದ 12 ವರ್ಷಗಳ ಅಧ್ಯಾಯಕ್ಕೆ ಅಂತ್ಯವನ್ನು ಹಾಡಿದೆ ಎಂದು indianexpress.com ವರದಿ ಮಾಡಿದೆ.

ಆದರೆ ಈ ತೀರ್ಪನ್ನು ಆನಂದಿಸಲು ರಹೀಂ ಅಲಿ ಬದುಕುಳಿದಿಲ್ಲ. ಎರಡು ವರ್ಷಗಳ ಹಿಂದೆಯೇ ಅವರು ‘ವಿದೇಶಿಯ’ ಮತ್ತು ‘ಬಾಂಗ್ಲಾದೇಶದ ಅಕ್ರಮ ವಲಸಿಗ’ ಎಂಬ ಹಣೆಪಟ್ಟಿಯೊಂದಿಗೆ ನಿಧನರಾಗಿದ್ದಾರೆ. ಅವರು ನಿಧನರಾಗಿದ್ದಾರೆಂಬ ವಿಷಯ ಸರ್ವೋಚ್ಚ ನ್ಯಾಯಾಲಯ ಮತ್ತು ಅವರ ವಕೀಲ ಸೇರಿದಂತೆ ಯಾರಿಗೂ ಗೊತ್ತಿರಲಿಲ್ಲ!

ಅಸ್ಸಾಮಿನ ನಲ್ಬಾರಿ ಜಿಲ್ಲೆಯ ಕಾಶಿಮ್‌ಪುರ ಗ್ರಾಮದ ನಿವಾಸಿ ಅಲಿ (58) 2021.ಡಿ.8ರಂದು ಇಹಲೋಕ ತ್ಯಜಿಸಿದ್ದರು,ಆದರೆ ಸರ್ವೋಚ್ಚ ನ್ಯಾಯಾಲಯ ತನ್ನ ಪಾಡಿಗೆ ಪ್ರಕರಣದ ವಿಚಾರಣೆಯನ್ನು ಮುಂದುವರಿಸಿತ್ತು.

ಅಲಿ ತನ್ನ ಮುಂದೆ ಹಾಜರಾಗಲು ವಿಫಲರಾಗಿದ್ದಾರೆ ಮತ್ತು ವಿದೇಶಿಯರ ಕಾಯ್ದೆಯ ಕಲಂ 9ರಡಿ ಅಗತ್ಯ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ ಎಂಬ ಕಾರಣವನ್ನು ನೀಡಿ ವಿದೇಶಿಯರ ನ್ಯಾಯಮಂಡಳಿಯು 2012ರಲ್ಲಿ ಅವರನ್ನು ವಿದೇಶಿಗ ಎಂದು ಘೋಷಿಸಿ ಏಕಪಕ್ಷೀಯ ಆದೇಶವನ್ನು ಹೊರಡಿಸಿತ್ತು.

ಇದನ್ನು ಪ್ರಶ್ನಿಸಿ ಅಲಿ ಗುವಾಹಟಿ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು. ಅನಾರೋಗ್ಯದಿಂದಾಗಿ ತನಗೆ ನ್ಯಾಯಮಂಡಳಿಯ ಮುಂದೆ ಹಾಜರಾಗಲು ಸಾಧ್ಯವಾಗಿರಲಿಲ್ಲ ಎಂದು ಅವರು ತನ್ನ ಅರ್ಜಿಯಲ್ಲಿ ನಿವೇದಿಸಿಕೊಂಡಿದ್ದರು, ಆದರೆ ಉಚ್ಚ ನ್ಯಾಯಾಲಯವು ಅವರ ಅರ್ಜಿಯನ್ನು ವಜಾಗೊಳಿಸಿತ್ತು.

ಬಳಿಕ ಅಲಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಲನ್ನೇರಿದ್ದರು. 2017ರಲ್ಲಿ ಸರ್ವೋಚ್ಚ ನ್ಯಾಯಾಲಯವು ಪ್ರಕರಣವನ್ನು ಮರುಪರಿಶೀಲಿಸುವಂತೆ ನ್ಯಾಯಮಂಡಳಿಗೆ ನಿರ್ದೇಶನ ನೀಡಿತ್ತು. ಈ ಸಲವೂ ನ್ಯಾಯಮಂಡಳಿಯು ಅಲಿ ಸಲ್ಲಿಸಿದ್ದ ದಾಖಲೆಗಳಲ್ಲಿ ಕಾಗುಣಿತ ಮತ್ತು ದಿನಾಂಕಗಳ ವ್ಯತ್ಯಾಸಗಳನ್ನು ಬೆಟ್ಟು ಮಾಡಿ ಅವರನ್ನು ವಿದೇಶಿಯ ಎಂದು ಘೋಷಿಸಿತ್ತು.

ಅಲಿಯವರನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದ ವಕೀಲ ಕೌಶಿಕ ಚೌಧುರಿ,ಅವರು ನಿಧನರಾಗಿದ್ದು ತನಗೆ ಗೊತ್ತಿರಲಿಲ್ಲ ಎಂದು ಸುದ್ದಿಸಂಸ್ಥೆಗೆ ತಿಳಿಸಿದರು.‘ಕುಟುಂಬ ಅಥವಾ ಸರಕಾರ ನಮಗೆ ಮಾಹಿತಿ ನೀಡಿರಲಿಲ್ಲ. ಇಂತಹ ಪ್ರಕರಣಗಳಲ್ಲಿ ಕಕ್ಷಿದಾರರು ವಿದ್ಯಾವಂತರಾಗಿರುವುದಿಲ್ಲ ’ ಎಂದರು.

ತನ್ನ ಪತಿ ಕಾನೂನು ಸಮರದುದ್ದಕ್ಕೂ ಪೋಲಿಸರು ತನ್ನನ್ನು ಬಂಧಿಸಬಹುದು ಎಂಬ ಭೀತಿಯಲ್ಲೇ ಬದುಕಿದ್ದರು. ಪೋಲಿಸರು ರಾತ್ರಿ ವೇಳೆಯಲ್ಲಿ ತನ್ನನ್ನು ಬಂಧಿಸಬಹುದು ಎಂಬ ಭಯದಿಂದ ಅವರು ಯಾರಿಗೂ ತಿಳಿಯದಂತೆ ರಾತ್ರಿ ಮನೆಯಿಂದ ಹೊರಬಿದ್ದು ಬೇರೆ ಯಾರದಾದರೂ ಮನೆಯಲ್ಲಿ ಕಳೆಯುತ್ತಿದ್ದರು ಎಂದು ಅಲಿಯವರ ಪತ್ನಿ ಹಜೇರಾ ಬೀಬಿ (51) ತಿಳಿಸಿದರು.

ಸರ್ವೋಚ್ಚ ನ್ಯಾಯಾಲಯವು ಜು.11ರಂದೇ ತೀರ್ಪು ನೀಡಿದ್ದರೂ ಮೂರು ದಿನಗಳ ಹಿಂದಷ್ಟೇ ಅಲಿಯವರ ಕುಟುಂಬಕ್ಕೆ ಅದು ಗೊತ್ತಾಗಿತ್ತು.

2012ರಿಂದ ನಡೆಯುತ್ತಿದ್ದ ಕಾನೂನು ಸಮರ ಅಲಿಯವರ ಕುಟುಂಬಕ್ಕೆ ಭಾರೀ ಆರ್ಥಿಕ ಹೊಡೆತವನ್ನು ನೀಡಿದೆ. ಸುಮಾರು 2.5 ಲಕ್ಷ ರೂ.ಗಳನ್ನು ವ್ಯಯಿಸಿದ್ದ ಕುಟುಂಬವು ಅದಕ್ಕಾಗಿ ತಮ್ಮ ಬಳಿಯಿದ್ದ ಜಾನುವಾರುಗಳು,ಅಲ್ಪ ಭೂಮಿಯನ್ನೂ ಮಾರಾಟ ಮಾಡಿತ್ತು ಎಂದು ಅಲಿಯವರ ಪುತ್ರ ಮುಜಿಬುರ್ ರಹಮಾನ್ ತಿಳಿಸಿದರು.

ಅಲಿಯವರ ಕುಟುಂಬವು 1997ರಿಂದ ಕಾಶಿಮ್‌ಪುರದಲ್ಲಿ ವಾಸವಾಗಿದ್ದರೂ,ಅವರ ಮನೆ ಈಗಲೂ ದುಃಸ್ಥಿತಿಯಲ್ಲಿದೆ. ಅಲಿ ಕೃಷಿಕಾರ್ಮಿಕರಾಗಿದ್ದು,ಅವರ ಇಬ್ಬರೂ ಪುತ್ರರು ದಿನಗೂಲಿಗಳಾಗಿದ್ದಾರೆ.

2004ರಲ್ಲಿ ಅಲಿಯವರ ಪೌರತ್ವವನ್ನು ಮೊದಲ ಬಾರಿಗೆ ಯಾವ ಆಧಾರದಲ್ಲಿ ಪ್ರಶ್ನಿಸಲಾಗಿತ್ತು ಎಂದು ನ್ಯಾಯಮೂರ್ತಿಗಳಾದ ವಿಕ್ರಮನಾಥ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನು ಒಳಗೊಂಡಿದ್ದ ಸರ್ವೋಚ್ಚ ನ್ಯಾಯಾಲಯದ ಪೀಠವು ಕೇಳಿದೆ.

ಅಲಿ ಅಕ್ರಮ ವಲಸಿಗರು ಎಂಬ ತಮ್ಮ ಶಂಕೆಗೆ ಗಡಿ ಪೋಲಿಸರು ಯಾವುದೇ ಸಮರ್ಥನೆಯನ್ನು ಒದಗಿಸದೆ ಪ್ರಕರಣವನ್ನು ಆರಂಭಿಸಿದ್ದನ್ನು ಸರ್ವೋಚ್ಚ ನ್ಯಾಯಾಲಯವು ಟೀಕಿಸಿದೆ.

ಅಲಿ ಮೂಲತಃ ಬಾಂಗ್ಲಾದೇಶದ ಮೈಮೆನ್‌ಸಿಂಗ್ ಜಿಲ್ಲೆಯ ಡೋರಿಜಹಾಂಗೀರ್‌ಪುರ ಗ್ರಾಮದ ನಿವಾಸಿಯಾಗಿದ್ದು, 1971,ಮಾ.25ರ ಬಳಿಕ ಭಾರತಕ್ಕೆ ವಲಸೆ ಬಂದಿದ್ದರು ಎಂಬ ಪೋಲಿಸರ ನಿರ್ದಿಷ್ಟ ಆರೋಪವನ್ನು ಬೆಟ್ಟು ಮಾಡಿರುವ ಸರ್ವೋಚ್ಚ ನ್ಯಾಯಾಲಯವು,ಇದನ್ನು ಸಮರ್ಥಿಸಿಕೊಳ್ಳಲು ಅವರ ಬಳಿ ಯಾವುದೇ ಸಾಕ್ಷ್ಯಾಧಾರವಿಲ್ಲ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News