60 ಕೋಟಿ ರೂ. ವಂಚನೆ ಪ್ರಕರಣ: ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾ ವಿರುದ್ಧ ಲುಕ್ ಔಟ್ ನೋಟಿಸ್
ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ (Photo credit: indiatoday.in)
ಮುಂಬೈ: 60 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ. ಈ ವಂಚನೆ ಪ್ರಕರಣವು ಸದ್ಯ ನಿಷ್ಕ್ರಿಯವಾಗಿರುವ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ ಗೆ ಸಂಬಂಧಿಸಿದೆ.
ದಂಪತಿಗಳು ಪದೇ ಪದೇ ವಿದೇಶಿ ಪ್ರವಾಸ ಕೈಗೊಳ್ಳುತ್ತಿರುವುದರಿಂದ, ಮುಂಬೈ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ಘಟಕವು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ಉದ್ಯಮಿಯೊಬ್ಬರಿಗೆ ಸುಮಾರು 60 ಕೋಟಿ ರೂ. ವಂಚಿಸಲಾಗಿದೆ ಎಂದು ನಟಿ ಶಿಲ್ಪಾ ಶೆಟ್ಟಿ ಹಾಗೂ ಆಕೆಯ ಪತಿ ರಾಜ್ ಕುಂದ್ರಾ ವಿರುದ್ಧ ಆಗಸ್ಟ್ 14ರಂದು ದಾಖಲಾಗಿದ್ದ ದೂರನ್ನು ಆಧರಿಸಿ ಈ ಪ್ರಕರಣ ದಾಖಲಾಗಿದೆ.
ಉದ್ಯಮ ವಿಸ್ತರಣೆಗೆಂದು ಮೀಸಲಾಗಿದ್ದ ನಿಧಿಯನ್ನು 2015ರಿಂದ 2023ರ ನಡುವೆ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ತಮ್ಮ ವೈಯಕ್ತಿಕ ಬಳಕೆಗಾಗಿ ಬಳಸಿಕೊಂಡಿದ್ದಾರೆ ಎಂದು ಮುಂಬೈ ಮೂಲದ ಉದ್ಯಮಿ ದೀಪಕ್ ಕೊಠಾರಿ ಎಂಬವರು ಆರೋಪಿಸಿದ್ದಾರೆ.
ರಾಜೇಶ್ ಆರ್ಯ ಎಂಬವರು ನನ್ನನ್ನು ಶಿಲ್ಪಾ ಶೆಟ್ಟಿ ದಂಪತಿಗಳಿಗೆ ಪರಿಚಯಿಸಿದರು. ಈ ವೇಳೆ ಬೆಸ್ಟ್ ಡೀಲ್ ಟಿವಿಯ ಶೇ. 87.6ರಷ್ಟು ಶೇರುಗಳ ಮೇಲೆ ದಂಪತಿಗಳು ನಿಯಂತ್ರಣ ಹೊಂದಿದ್ದರು ಎಂದು ಅವರು ಹೇಳಿದ್ದಾರೆ.
ಆರಂಭದಲ್ಲಿ ಶೇ. 12ರ ಬಡ್ಡಿ ದರದಲ್ಲಿ 75 ಕೋಟಿ ರೂ. ಸಾಲ ಕೋರಿದ್ದ ದಂಪತಿಗಳು, ನಂತರ, ಮಾಸಿಕ ಮರುಪಾವತಿ ಹಾಗೂ ಅಸಲಿನ ಮರುಪಾವತಿಯ ಭರವಸೆಯೊಂದಿಗೆ ತೆರಿಗೆಯನ್ನು ಕಡಿತಗೊಳಿಸಲು ಆ ಮೊತ್ತವನ್ನು ಹೂಡಿಕೆಯಾಗಿ ವಿನಿಯೋಗಿಸುವಂತೆ ನನ್ನನ್ನು ಬಲವಂತಪಡಿಸಿದರು ಎಂದು ದೀಪಕ್ ಕೊಠಾರಿ ಆರೋಪಿಸಿದ್ದಾರೆ.
ತಮ್ಮ ವಿರುದ್ಧ ದಾಖಲಾಗಿರುವ ಈ ಹೊಸ ದೂರಿನಿಂದ ದಂಪತಿಗಳ ಕಾನೂನು ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ. ಚಿನ್ನದ ಯೋಜನೆಯಲ್ಲಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಹೂಡಿಕೆದಾರರೊಬ್ಬರಿಗೆ ವಂಚಿಸಿದ್ದಾರೆ ಎಂದು ಈ ವರ್ಷದ ಆರಂಭದಲ್ಲಿ ರಿದ್ಧಿ ಸಿದ್ಧಿ ಬುಲಿಯನ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪೃಥ್ವಿರಾಜ್ ಕೊಠಾರಿ ಎಂಬವರು ಆರೋಪಿಸಿದ್ದರು.
ಇದಕ್ಕೂ ಮುನ್ನ, ಅಶ್ಲೀಲ ವಿಡಿಯೊ ನಿರ್ಮಾಣ ಪ್ರಕರಣದಲ್ಲಿ 2021ರಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೀಡಾಗಿದ್ದ ರಾಜ್ ಕುಂದ್ರಾ, ನಂತರ, ಜಾಮೀನಿನ ಮೇಲೆ ಹೊರ ಬಂದಿದ್ದರು. ಇದಲ್ಲದೆ, ಬಿಟ್ ಕಾಯಿನ್ ವಂಚನೆಗೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಮತ್ತೊಂದು ಪ್ರತ್ಯೇಕ ಅಕ್ರಮ ಹಣ ವರ್ಗಾವಣೆ ತನಿಖೆಯನ್ನೂ ಎದುರಿಸುತ್ತಿದ್ದಾರೆ.